ಮುಸ್ಲಿಂ ಮೆಹಂದಿ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕೆಲವು ಘಟನೆಗಳು ಜಿಲ್ಲೆಯ ಕೋಮು ಸಾಮರಸ್ಯತೆಗೆ ಧಕ್ಕೆ ತರುತ್ತವೆಯಾದರೂ, ಈ ಜಿಲ್ಲೆಯ ಜನತೆ ಯಾವತ್ತೂ ಸಹೋದರತೆ ಮತ್ತು ಸಾಮರಸ್ಯವನ್ನೇ ಬಯಸುತ್ತಾರೆ ಅನ್ನುವುದಕ್ಕೆ ಕಲ್ಲಡ್ಕದಲ್ಲಿ ಶುಕ್ರವಾರ ನಡೆದ ಮೆಹಂದಿ ಕಾರ್ಯಕ್ರಮ ಸಾಕ್ಷಿಯಾಯಿತು. ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಸಮುದಾಯದ ಮೆಹಂದಿ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿದ್ದರು
ಪ್ರಭಾಕರ್ ಭಟ್ ಮತ್ತು ಅವರ ಪತ್ನಿ ಕಮಲಾ ಪ್ರಭಾಕರ್ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮದುಮಗಳಿಗೆ ಶುಭ ಹಾರೈಸುವ ಮೂಲಕ ಭ್ರಾತೃತ್ವದ ಸಂದೇಶ ಸಾರಿದ್ದಾರೆ.
ಹಕೀಂ ಕಲ್ಲಡ್ಕ ಎನ್ನುವವರ ಇಬ್ಬರು ಹೆಣ್ಣು ಮಕ್ಕಳು ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಓದುತ್ತಿದ್ದು, ಆ ಮಕ್ಕಳ ಮಾವನ ಮಗಳ ಮೆಹೆಂದಿ ಕಾರ‍್ಯಕ್ರಮ ಶುಕ್ರವಾರ ಕಲ್ಕಡ್ಕದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮದುಮಗಳ ತಾಯಿ ವಾರದ ಹಿಂದೆ ಭಟ್ ಅವರ ಮನೆಗೆ ಹೋಗಿ ಆಹ್ವಾನಿಸಿದ್ದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 3 ಗಂಟೆ ಹೊತ್ತಿಗೆ ದಂಪತಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಮದುಮಗಳನ್ನು ಆಶೀರ್ವದಿಸಿ ಎಳನೀರು ಕುಡಿದು ಎಲ್ಲರ ಜತೆ ಕ್ಷೇಮ ಸಮಾಚಾರ ಮಾತಾಡಿ ತೆರಳಿದ್ದಾರೆ.
ಪ್ರಬಾಕರ ಬಟ್ ಅವರ ಈ ನಡೆಯನ್ನು ಮೆಹೆಂದಿ ಮನೆಯಲ್ಲಿದ್ದ ಪ್ರತಿಯೊಬ್ಬರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಭಟ್ ಅವರ ಜತೆ ಶ್ರೀರಾಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರವಿರಾಜ್, ಕಾರ್ಯಕರ್ತ ಕೃಷ್ಣಪ್ಪ ಸಹ ಪಾಲ್ಗೊಂಡಿದ್ದರು.