ಹುತಾತ್ಮ ಯೋಧ ಹನುಮಂತಪ್ಪ ತಾಯಿ ಜೊತೆ ಅನಂತ್ ಕುಮಾರ್ ಹೆಗೆಡೆ, ಜೋಶಿ ಚರ್ಚೆ
ಹುಬ್ಬಳ್ಳಿ: ಸಿಯಾಚಿನ್ ಹುತಾತ್ಮ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಹುಟ್ಟೂರಾದ, ಕುಂದಗೋಳ ತಾಲೂಕಿನ ಬೆಟದೂರು ಗ್ರಾಮ ಭಾನುವಾರ ಒಂದು ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಸುಮಾರು 12 ಗಂಟೆಗಳಲ್ಲಿ 101 ಶೌಚಾಲಯಗಳನ್ನು ಗ್ರಾಮದಲ್ಲಿ ನಿರ್ಮಿಸಲಾಗಿದೆ.
ಈ ಗ್ರಾಮದಲ್ಲಿ 1,030 ಮನೆಗಳಿವೆ. ಅದರಲ್ಲಿ 800 ಮನೆಗಳಲ್ಲಿ ಮಾತ್ರಶೌಚಾಲಯಗಳಿದ್ದವು, ಸೆಪ್ಟಂಬರ್ 17 ರಿಂದ ಅಕ್ಟೋಬರ್ 2 ರ ವರೆಗೂ ನಡೆಯುವ ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ನಡೆಯಲಿದೆ, ಶೌಚಾಲಯ ನಿರ್ಮಿಸಿಕೊಳ್ಳಲು ಶಕ್ತರಿಲ್ಲದ ಕುಟುಂಬಗಳಿಗೆ ಗ್ರಾಮದಲ್ಲಿ 101 ಶೌಚಾಲಯ ನಿರ್ಮಿಸಿ ಕೊಡಲಾಗಿದೆ. ಉಳಿದ ಮನೆಗಳಿಗೆ ಅಕ್ಟೋಬರ್ 2 ರಳೊಗೆ ಶೌಚಾಲಯ ನಿರ್ಮಿಸಿಕೊಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.
ಶೌಚಾಲಯ ನಿರ್ಮಾಣದ ಉದ್ದೇಶಕ್ಕಾಗಿ ಕೆಲ ದಿನಗಳ ಹಿಂದೆಯೇ ಗುಂಡಿ ತೋಡಿ ಟಾಯ್ಲೆಟ್ ಸೀಟ್ ಗಳನ್ನು ಸಿದ್ಧಗೊಳಿಸಲಾಗಿತ್ತು, ಭಾನುವಾರ ಇಂಟರ್ ಲಾಕಿಂಗ್ ಇಟ್ಟಿಗೆಗಳಿಂದ ಗೋಡೆ ಕಟ್ಟಿ, ಮೇಲ್ಛಾವಣಿಗಾಗಿ ಶೀಟ್ ಗಳನ್ನು ಅಳವಡಿಸಲಾಯಿತು. ಶೌಚಾಲಯದ ಮೇಲ್ಬಾಗದಲ್ಲಿ ನೀರಿನ ಟ್ಯಾಂಕರ್, ಫಿಕ್ಸ್ ಮಾಡಲಾಗಿದೆ.
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಭಾನುವಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಯಲು ಮುಕ್ತ ಶೌಚಕ್ಕಾಗಿ ಪ್ರತಿ ವರ್ಷ 600 ಕೋಟಿ ರು ಹಣ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದರು.
ಪ್ರತಿ ಮನೆ ಮನೆಯಲ್ಲೂ ಶೌಚಾಲಯ ನಿರ್ಮಿಸಲು ಕೇಂದ್ರ ಸರ್ಕಾರ ಸಾಮಾನ್ಯ ವರ್ಗದವರಿಗೆ 12 ಸಾವಿರ ಹಾಗೂ ಎಸ್ ಎಸ್ಸಿ, ಎಸ್ಟಿ ವರ್ಗದವರಿಗೆ 15 ಸಾವಿರ ರು. ಪ್ರೋತ್ಸಾಹ ಧನ ನೀಡುತ್ತಿದೆ, ಹೀಗಾಗಿ ಗ್ರಾಮಸ್ಥರು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಅಕ್ಟೋಬರ್ 2 ರೊಳಗೆ ಜಿಲ್ಲೆಯನ್ನು ಬಯಲು ಶೌಚದಿಂದ ಮುಕ್ತಗೊಳಿಸಲಾಗುವುದು ಎಂದು ಧಾರವಾಡ ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಆರ್ ಹೇಳಿದ್ದಾರೆ.
ಜಿಲ್ಲೆಯಲ್ಲಿ 1.44 ಲಕ್ಷ ಮನೆಗಳಿದ್ದು, ಅದರಲ್ಲಿ 1.20 ಲಕ್ಷ ಮನೆಗಳಲ್ಲಿ ಶೌಚಾಲಯಗಳಿವೆ, ಉಳಿದ 13 ಸಾವಿರ ಶೌಚಾಲಯಗಳ ನಿರ್ಮಾಣ ಕಾರ್ಯ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಸಂಸದ ಪ್ರಹ್ಲಾದ್ ಜೋಶಿ ಮತ್ತು ಸಚಿವ ಹೆಗಡೆ ಇಬ್ಬರು ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಮನೆಗೆ ಭೇಟಿ ನೀಡಿ, ಅವರ ತಾಯಿ ಬಸಮ್ಮ ಮತ್ತು ಕುಟುಂಬಸ್ಥರ ಜೊತೆ ಚರ್ಚಿಸಿದರು.