ಬೆಂಗಳೂರು: ಟಿ.ದಾಸರಹಳ್ಳಿ ಸಮೀಪ ತುಮಕೂರು ರಸ್ತೆಯಲ್ಲಿ ಜಗಳವುಂಟಾಗಿ 26 ವರ್ಷದ ಯುವಕ ಪವನ್ ಕುಮಾರ್ ನನ್ನು ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಾದನಾಯಕನಹಳ್ಳಿ ಪೊಲೀಸರು ನಿನ್ನೆ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮೂವರು ಪವನ್ ನನ್ನು ಕಾರಿನಿಂದ ಹೊರಗೆ ಎಳೆದು ಅವರಲ್ಲಿ ಒಬ್ಬ ಪವನ್ ಗೆ ಚಾಕುವಿನಿಂದ ಇರಿದು ಕೊಂದು ಹಾಕಿದ್ದ. ಈ ಘಟನೆ ಕಳೆದ ಭಾನುವಾರ ರಾತ್ರಿ ನಡೆದಿತ್ತು. ಪವನ್ ನನ್ನು ಇರಿದ ನಂತರ ದುಷ್ಕರ್ಮಿಗಳು ಮತ್ತೊಬ್ಬ ಬೈಕ್ ಸವಾರನ ಮೇಲೆ ದಾಳಿ ನಡೆಸಿ ದರೋಡೆ ಮಾಡಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ವಿಶೇಷ ತಂಡ ಒಬ್ಬನನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿಯನ್ನು ಜಗದೀಶ್ ಅಲಿಯಾಸ್ ಜಗ್ಗ ಎಂದು ಗುರುತಿಸಲಾಗಿದೆ. ಈತ ಟಿ.ದಾಸರಹಳ್ಳಿಯ ನಿವಾಸಿಯಾಗಿದ್ದಾನೆ. ಎರಡನೇ ಆರೋಪಿ ಜಗ್ಗನ ಸ್ನೇಹಿತ ಮುನಿರತ್ನನಗರದ ದಯಾನಂದ್ ಅಲಿಯಾಸ್ ದಯಾ ಆಗಿದ್ದಾನೆ. ಮೂರನೇ ಆರೋಪಿ ಯಾರೆಂದು ಇನ್ನೂ ಗೊತ್ತಾಗಿಲ್ಲ.
ಮೂವರು ಕೂಡ ಈ ಹಿಂದೆ ಸಾಕಷ್ಟು ಕೊಲೆ ಮತ್ತು ಕೊಲೆ ಯತ್ನಗಳನ್ನು ನಡೆಸಿದ್ದು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು.
ಮೂವರು ಆರೋಪಿಗಳು ಕಳೆದ ಭಾನುವಾರ ರಾತ್ರಿ ತುಮಕೂರು ರಸ್ತೆ ಬಳಿ ಹೋಗುತ್ತಿದ್ದಾಗ ಅವರ ಬೈಕ್ ಗೆ ಟ್ರಾವಲ್ ಏಜೆನ್ಸಿಯಲ್ಲಿ ನೌಕರರಾಗಿದ್ದ ಪವನ್ ಕುಮಾರ್ ಕಾರು ಡಿಕ್ಕಿ ಹೊಡೆಯಿತು ಎಂದು ಜಗಳ ಆರಂಭವಾಗಿತ್ತು.
ಪವನ್ ತಮ್ಮ ಸ್ನೇಹಿತರ ಜೊತೆ ಸಿನಿಮಾ ವೀಕ್ಷಿಸಿ ಜಾಲಹಳ್ಳಿ ಕ್ರಾಸ್ ನಿಂದ ತಮ್ಮ ಮನೆ ಚಿಕ್ಕಬಿದಿರಕಲ್ಲಿನ ವಿನಾಯಕನಗರ ಕಡೆಗೆ ಬರುತ್ತಿದ್ದರು. ಮೂವರು ಆರೋಪಿಗಳು ಬೈಕ್ ನಲ್ಲಿ ಪವನ್ ಕಾರನ್ನು ಹಿಂಬಾಲಿಸಿಕೊಂಡು ಬಂದು 8ನೇ ಮೈಲಿ ಹತ್ತಿರ ಕಾರು ಅಡ್ಡಗಟ್ಟಿ ಬೈಯಲು ಆರಂಭಿಸಿದರು. ನಂತರ ಜಗಳ ತಾರಕಕ್ಕೇರಿತ್ತು.
ಅಲ್ಲಿಂದ ಇಬ್ಬರು ಬುದ್ಧಜ್ಯೋತಿ ಲೇ ಔಟ್ ಗೆ ಓಡಿಹೋಗಿ ಅಲ್ಲಿ ಮತ್ತೊಬ್ಬ ಯುವಕ ಚರಣ್ ನನ್ನು ಹಿಡಿಯಲೆತ್ನಿಸಿದರು. ಚರಣ್ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಚರಣ್ ನೀಡಿರುವ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics