ಬೆಂಗಳೂರು: ನಗರ ಪಾಲಿಕೆಯ 688 ಕೋಟಿ ರೂಪಾಯಿ ಮೊತ್ತದ ಬಹುದೊಡ್ಡ ಕಸ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ.ಜಾರ್ಜ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಬೆಂಗಳೂರು ನಗರ ಘಟಕ ನಿನ್ನೆ ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದೆ.
ಬೆಂಗಳೂರು ನಗರ ಬಿಜೆಪಿ ಘಟಕದ ವಕ್ತಾರ ಎನ್.ಆರ್.ರಮೇಶ್, ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯ ಪಡೆ ಮತ್ತು ಹೆಚ್ಚುವರಿ ನಗರ ಮೆಟ್ರೊ ಪಾಲಿಟನ್ ಮ್ಯಾಜಿಸ್ಟ್ರೇಟ್ ಗೆ ಕೂಡ ಹಗರಣ ನಡೆದಿದೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದಾರೆ.
2016-17ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಸ ವಿಲೇವಾರಿಗೆ 1,066 ಕೋಟಿ ರೂಪಾಯಿ ವೆಚ್ಚ ಮಾಡಿತ್ತು. ಅದರ ಹಿಂದಿನ ವರ್ಷ ಕಸ ವಿಲೇವಾರಿಗೆ ಆದ ವೆಚ್ಚ 385 ಕೋಟಿ ರೂಪಾಯಿಗಳು. ಒಂದೇ ವರ್ಷದಲ್ಲಿ ಕಸ ವಿಲೇವಾರಿಗೆ 688 ಕೋಟಿ ರೂಪಾಯಿ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ತಿಂಗಳಲ್ಲಿ 88.87 ಕೋಟಿ ರೂಪಾಯಿ ಖರ್ಚಾಗುತ್ತದೆ.
ಈ ಮೂಲಕ ಬಿಬಿಎಂಪಿ ಈ ಹಣಕಾಸು ವರ್ಷದ ಕೊನೆಗೆ 1,066.44 ಕೋಟಿ ರೂಪಾಯಿ ವೆಚ್ಚ ಮಾಡಲಿದೆ. ಅಂದರೆ ಸುಮಾರು ಶೇಕಡಾ 265 ರಷ್ಟು ಹೆಚ್ಚಳವಾದಂತಾಗುತ್ತದೆ ಎಂದು ರಮೇಶ್ ಅಂಕಿಅಂಶ ನೀಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಯಾಗಲಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಆಗಲಿ ಪ್ರತಿಕ್ರಿಯೆಗೆ ಸಿಕ್ಕಿಲ್ಲ.