ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ಕೇಂದ್ರ ಬಿಂದು ಐತಿಹಾಸಿಕ ಜಂಬೂ ಸವಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ.
ನಾಡದೇವತೆ ಚಾಮುಂಡೇಶ್ವರಿ ದೇವತೆಯನ್ನು ಹೊರಲಿರುವ ಆನೆ ಅರ್ಜುನ ಸಿದ್ಧನಾಗಿದ್ದು, ಅರ್ಜುನನ್ನು ಸಕಲ ರೀತಿಯಲ್ಲೂ ಸಿಂಗಾರಗೊಳಿಸಿ ಸಿದ್ಧಗೊಳಿಸಲಾಗಿದೆ. ಜಂಬೂ ಸವಾರಿ ಹಿನ್ನಲೆಯಲ್ಲಿ ಅರಮನೆ ನಗರಿ ಸಕಲ ರೀತಿಯಲ್ಲಿ ಸಜ್ಜಾಗಿದೆ. ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳವ ಆನೆಗಳಿಗೆ ಅಲಂಕಾರ ಮಾಡಲಾಗುತ್ತಿದ್ದು, ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ರಾಜ ಯದುವೀರ್ ಒಡೆಯರ್ಅವರು ವಿಜಯದಶಮಿ ಮತ್ತು ಶಮಿ ಪೂಜೆ ನೆರವೇರಿಸಲಿದ್ಧಾರೆ.
ಮಧ್ಯಾಹ್ನ 2.15ರ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ನೆರವೇರಿಸಲಾಗುತ್ತದೆ. ಸಂಜೆ 4.45ಕ್ಕೆ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ದೇವಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಐತಿಹಾಸಿಕ ವಿಶ್ವವಿಖ್ಯಾತ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಚಿನ್ನದ ಅಂಬಾರಿ ಹೊತ್ತ ಅರ್ಜುನ, ಅರಮನೆಯ ಬಲರಾಮ ದ್ವಾರದಿಂದ ತೆರಳಲಿದ್ದು, ಬನ್ನಿ ಮಂಟಪ ತಲುಪಲಿದೆ. ಜಂಬೂ ಸವಾರಿ ಮೆರವಣಿಗೆಯಲ್ಲಿ 40 ಕಲಾತಂಡಗಳು, 40 ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ. ಇನ್ನು ರಾತ್ರಿ 8 ಗಂಟೆಗೆ ಬನ್ನಿ ಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದ್ದು, ರಾಜ್ಯಪಾಲ ವಾಜುಬಾಯ್ವಾಲಾ ಪಾಲ್ಗೊಳ್ಳಲಿದ್ದಾರೆ.