ಬೆಂಗಳೂರು: ಕಳೆದ ಗುರುವಾರ ನಮ್ಮ ಮೆಟ್ರೊದಲ್ಲಿ ಪ್ರಯಾಣಿಕರ ಸಂಖ್ಯೆ 4 ಲಕ್ಷ ಗಡಿ ದಾಟಿದೆ. ಅಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಕ್ರಿಕೆಟ್ ಪಂದ್ಯ ಮತ್ತು ಶುಕ್ರವಾರದಿಂದ ನಾಳೆಯವರೆಗೆ ದೀರ್ಘಾವಧಿಯ ರಜೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೊದಲ್ಲಿ ಪ್ರಯಾಣಿಸಲು ವರದಾನವಾಯಿತು.
ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ನಿಯಮಿತ ನೀಡಿರುವ ಅಂಕಿಅಂಶ ಪ್ರಕಾರ ನೇರಳೆ ಬಣ್ಣದ ಮಾರ್ಗದಲ್ಲಿ 2,37,580 ಮಂದಿ ಪ್ರಯಾಣಿಕರು, ಹಸಿರು ಮಾರ್ಗದಲ್ಲಿ 1,72,470 ಮಂದಿ ಪ್ರಯಾಣಿಕರು ಸಂಚರಿಸಿದ್ದಾರೆ. ಒಟ್ಟು 4,10,050 ಮಂದಿ ಪ್ರಯಾಣಿಕರು ಮೆಟ್ರೊದಲ್ಲಿ ಸಂಚಾರ ಮಾಡಿದ್ದಾರೆ ಎಂದು ತಿಳಿಸಿದೆ.
ಕಳೆದ ಜೂನ್ 19ರಂದು ನಮ್ಮ ಮೆಟ್ರೊದ ಮೊದಲ ಹಂತ ಸಂಪೂರ್ಣವಾಗಿ ಕಾರ್ಯಾರಂಭ ಮಾಡಲು ಆರಂಭಿಸಿದಾಗ 3 ಲಕ್ಷ ಪ್ರಯಾಣಿಕರು ಸಂಚರಿಸಿದ್ದರು.
ಕಳೆದ ಗುರುವಾರ ಭಾರತ-ಆಸ್ಟ್ರೇಲಿಯಾ ನಡುವೆ ಕ್ರಿಕೆಟ್ ಪಂದ್ಯವಿದ್ದುದರಿಂದ ಮೆಟ್ರೊ ರೈಲು ಸಂಚಾರವನ್ನು ಮಧ್ಯ ರಾತ್ರಿಯವರೆಗೆ ವಿಸ್ತರಿಸಲಾಗಿತ್ತು.