ರೈತ ರಾಜೇಂದ್ರ ಎಂಬುವರ ಮನೆಗೆ ಭೇಟಿ ನೀಡಿದ್ದ ಅಮಿತ್ ಶಾ
ಮಂಡ್ಯ: ಸಾಲಬಾಧೆಯಿಂದ ಮನನೊಂದು 2015ರ ಜೂನ್ 19ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಮಂಡ್ಯದ ರೈತ ಸಿ, ರಾಜೇಂದ್ರ ಎಂಬುವರ ಮನೆಗೆ ತೆರಳಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚನ್ನೆನಹಳ್ಳಿ ಗ್ರಾಮದ ನಿವಾಸಿ ರಾಜೇಂದ್ರ ಕಬ್ಬು ಬೆಳೆಗಾರ. ಕೃಷಿಗಾಗಿ ಬ್ಯಾಂಕ್ ನಲ್ಲಿ ಈತ 12 ಲಕ್ಷ ರು ಸಾಲ ಮಾಡಿದ್ದರು. ಆದರೆ ಸಾಲ ತೀರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜೇಂದ್ರ ಆತ್ಮಹತ್ಯೆಗೆ ಶರಣಾಗಿದ್ದರು. ರಾಜೇಂದ್ರ ಮೃತಪಟ್ಟು ಸುಮಾರು ಮೂರು ವರ್ಷಗಳೇ ಕಳೆದಿವೆ, ಸರ್ಕಾರ ನೀಡಿದ ಪರಿಹಾರದ ಹಣದಲ್ಲಿ ಸ್ವಲ್ಪ ಮಟ್ಟಿನ ಸಾಲ ಪಾವತಿಯಾಗಿದೆ, ಆದರೆ ಪೂರ್ಣವಾಗಿ ಸಾಲ ತೀರಿಲ್ಲ.
ರಾಜೇಂದ್ರ ಅವರ ಪುತ್ರ ಮಧು ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡಿದ್ದು, ಪಟ್ಟಣದ ಮುನಿಸಿಪಲ್ ಕಚೇರಿಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದು 7 ಸಾವಿರ ರು ವೇತನ ಪಡೆಯುತ್ತಿದ್ದಾರೆ, ತನ್ನ ,ತಂದೆ ಮಾಡಿದ್ದ ಸಾಲ ಸ್ವಲ್ಪ ಮಟ್ಟಿಗೆ ತೀರಿದೆ. ಆದರೆ ಉಳಿದ ಹಣ ಪಾವತಿಸದ ಹಿನ್ನೆಲೆಯಲ್ಲಿ ಅದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿ ವ ವಿಧಿಸುತ್ತಾರೆ ಎಂಬುದು ಅವರ ಆತಂಕವಾಗಿದೆ.
ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜೇಂದ್ರ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ ಮಧು ತಮ್ಮ ಗುತ್ತಿಗೆ ಆಧಾರದ ನೌಕರಿಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ್ದಾರೆ, ಅಮಿತ್ ಶಾ ಭೇಟಿ ಮಧು ಕುಟುಂಬಕ್ಕೆ ಸಹಾಯವಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.