ಬೆಂಗಳೂರು: ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ರೈಲ್ವೆ ವಿಭಾಗಗಳನ್ನು ಒಳಗೊಂಡ ದಕ್ಷಿಣ ಪಶ್ಚಿಮ ರೈಲ್ವೆ ವಲಯ ದೇಶದಲ್ಲಿ ಅತ್ಯಂತ ಸುರಕ್ಷೆಯ ರೈಲ್ವೆ ವಲಯ ಎಂದು ರೈಲ್ವೆ ಸಚಿವಾಲಯ ಘೋಷಿಸಿದೆ. ಭಾರತೀಯ ರೈಲ್ವೆ ಪ್ರತಿವರ್ಷ ಸುರಕ್ಷ ದಕ್ಷತೆಯ ಬಹುಮಾನ ಎಂದು ಘೋಷಿಸುತ್ತದೆ. ಈ ವಲಯದ ಮೂವರು ರೈಲ್ವೆ ಸಿಬ್ಬಂದಿ ರಾಷ್ಟ್ರೀಯ ಪುರಸ್ಕಾರವನ್ನು ಪಡೆದಿದ್ದಾರೆ.
ದೇಶದ 17 ರೈಲ್ವೆ ವಲಯಗಳಲ್ಲಿ ದಕ್ಷಿಣ ಪಶ್ಚಿಮ ರೈಲ್ವೆ ಮೊದಲ ಸ್ಥಾನ ಗಳಿಸಿದೆ. ಕಳೆದ ಹಣಕಾಸು ಸಾಲಿನಲ್ಲಿ ಈ ವಲಯದಲ್ಲಿ ಕೇವಲ ಒಂದು ರೈಲ್ವೆ ಅಪಘಾತವಾಗಿದೆ. ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಉಪ ಪ್ರಧಾನ ವ್ಯವಸ್ಥಾಪಕ ಇ.ವಿಜಯ ಅವರಿಗೆ ಅದ್ವಿತೀಯ ಸಾಧನೆ ಪುರಸ್ಕಾರ ಪಡೆಯಲಿದ್ದಾರೆ. ಲೆಕ್ಕಪತ್ರ ಸಹಾಯಕ ಗುರುರಾಜ್ ಬಿ ಮೊಖಸಿ ಮತ್ತು ರೈಲ್ವೆ ಹಳಿ ನಿರ್ವಾಹಕ ಮಂಜುನಾಥ್ ಬಿ ಗುಣ್ಣನವರ್ ಅವರಿಗೆ ಸಹ ಅದ್ವಿತೀಯ ಸಾಧನೆಗಾಗಿ ವಿಶೇಷ ಪುರಸ್ಕಾರ ಲಭಿಸಲಿದೆ.
ಮುಂದಿನ ವಾರ ಭೋಪಾಲ್ ನಲ್ಲಿ ನಡೆಯಲಿರುವ ರೈಲ್ವೆ ಸಪ್ತಾಹ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.