ಬೆಂಗಳೂರು : ಬೆಳ್ಳಂದೂರು, ಅಗರ, ಮತ್ತು ವರ್ತೂರು ಕೆರೆಗಳ ಶುಚಿತ್ವ ಕುರಿತ ರಾಜ್ಯಸರ್ಕಾರದ ವರದಿಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ.
ನಿನ್ನೆ ಈ ಸಂಬಂಧದ ಅರ್ಜಿ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ, ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, ವಕೀಲರು, ವಿಜ್ಞಾನಿಗಳು ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಯನ್ನೊಳಗೊಂಡ ತಂಡವೊಂದನ್ನು ರಚಿಸಿದೆ.
ಕೆರೆ ನೀರಿನ ನೊರೆ ಪ್ರಮಾಣ ಹಾಗೂ ವಿಷಕಾರಿ ಅಂಶದ ಪ್ರಮಾಣದ ಬಗ್ಗೆ ಎನ್ ಜಿ ಟಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಮೂರು ಕೆರೆಗಳ ಸ್ವಚ್ಛತೆ ಕುರಿತ ವರದಿಯನ್ನು ರಾಜ್ಯಸರ್ಕಾರ ವರದಿ ಸಲ್ಲಿಸಿತು. ಆದರೆ, ಸರಿಯಾದ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ನಂತರ ಮೂರು ಕೆರೆಗಳ ಪರಿಶೀಲನೆಗಾಗಿ ಹಿರಿಯ ವಕೀಲ ರಾಜ್ ಪಂಜ್ವಾನಿ, ಬಿಬಿಎಂಪಿ ಕಮಿಷನರ್, ಕೇಂದ್ರಿಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ವಿಜ್ಞಾನಿ , ಕೆಎಲ್ ಸಿಡಿಎ ಸಿಇಒ ಮತ್ತು ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಯನ್ನೊಳಗೊಂಡ ಸಮಿತಿಯೊಂದನ್ನು ರಚಿಸಿತು.
ಏ. 10 ರವರೆಗೆ ಸಂಭವಿಸಿರುವ ಕೆರೆಯಲ್ಲಿ ಬೆಂಕಿ ಪ್ರಕರಣಗಳ ದಾಖಲೆಗಳನ್ನು ಈ ಸಮಿತಿ ಪರಿಶೀಲನೆ ನಡೆಸಲಿದ್ದು, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆಯೂ ಸಲಹೆ ನೀಡಲಿದೆ. ಈ ಮಧ್ಯೆ ಜನವರಿ ನಂತರ ಕೆರೆಯಲ್ಲಿ ಯಾವುದೇ ರೀತಿಯ ಬೆಂಕಿ ಸಂಭವಿಸಿಲ್ಲ ಎಂದು ಬಿಡಿಎ ಅಧಿಕಾರಿ ನಾಗರಾಜ್ ಎನ್ ಜಿಟಿಯ ಗಮನಕ್ಕೆ ತಂದರು.
ನಾಗರಾಜ್ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದ್ದು, ಇದೇ ರೀತಿ ಪರಿಶೀಲನೆ ನಡೆಸುವಂತೆ ರಾಜ್ಯಸರ್ಕಾರಕ್ಕೆ ಎನ್ ಜಿಟಿ ನಿರ್ದೇಶನ ನೀಡಿದೆ.