ಬೆಂಗಳೂರು: ತನ್ನನ್ನು ಕೆಲಸದಿಂಡ ವಜಾ ಗೊಳಿಸಿದ್ದರಿಂದ ಹತಾಶೆಗೊಳಗಾದ ಎಂಬಿಎ ಪದವೀಧರನೊಬ್ಬ ತಾನು ಕೆಲಸ ಮಾಡುತ್ತಿದ್ದ ಸ್ಪಾ, ಸಲೂನ್ ಮಾಲೀಕಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸ್ಪಾ-ಸಲೂನ್ ಮಾಲೀಕಳಾದ ದೀಪಾಲಿ ರಾಯ್ (ಹೆಸರು ಬದಲಿಸಲಾಗಿದೆ) ಮೊದಲಿಗೆ ಆ ಯುವಕನಿಗೆ ತನ್ನ ವಿರುದ್ಧ ದ ಬರಹಗಳನ್ನು ತೆಗೆದು ಹಾಕುವಂತೆ ವಿನಂತಿಸಿದ್ದಾರೆ. ಆದರೆ ಯುವಕ ಮಾತ್ರ ಅವರ ಪುನರಾವರ್ತಿತ ವಿನಂತಿಗಳಿಗೆ ಕಿವಿಗೊಡಲಿಲ್ಲ. ಈಗ ಮಹಿಳೆಯು ಯುವಕನ ವಿರುದ್ಧ ಪೋಲೀಸರಿಗೆ ದೂರಿತ್ತಿದ್ದಾರೆ.
ಬೆಂಗಳೂರು ವೈಟ್ ಫೀಲ್ಡ್ ನಲ್ಲಿರುವ ಪ್ರೆಸ್ಟೀಜ್ ಶಾಂತಿನಿಕೇತನ ನಿವಾಸಿಯಾದ ದೀಪಾಲಿ ಕೋಲ್ಕತ್ತಾ ಮೂಲದವರು. ಎರಡು ಸಲೂನ್ ಗಳ ಮಾಲೀಕರಾದ ಈಕೆಯ ಕೈಕೆಳಗೆ ಸುಮಾರು 15 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಹಿಂದಿನ ಮ್ಯಾನೇಜರ್ ಒಬ್ಬ ನಗದನ್ನು ಕಳವು ಮಾಡಿ ಪರಾರಿಯಾದ ಬಳಿಕ ಡಿಸೆಂಬರ್ 2017ರಲ್ಲಿ ಈಕೆ ಚಂದನ್ ಶಾ ನನ್ನು ಸಲೂನ್ ಹಾಗೂ ಸ್ಪಾ ಗಳ ನೂತನ ಮ್ಯಾನೇಜರ್ ಆಗಿ ನೇಮಕ ಮಾಡಿಕೊಂಡಿದ್ದರು.
"ಆತ ಪ್ರಾರಂಭದಲ್ಲಿ ಒಳ್ಳೆಯ ಕೆಲಸಗಾರನಾಗಿದ್ದ ಆದರೆ ತಿಂಗಳು ಕಳೆದಂತೆ ಹೆಚ್ಚು ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಲು ಪ್ರಾರಂಭಿಸಿದ್ದ. ಕೆಲಸದ ಕಡೆ ಹೆಚ್ಚು ಗಮನ ಕೇಂದ್ರೀಕರಿಸುತ್ತಿರಲಿಲ್ಲ. ನಾನು ಅವನಿಗೆ ಸಾಕಷ್ಟು ಬಾರಿ ಎಚ್ಚರಿಸಿದೆ ಆದರೆ ಆತ ತಿದ್ದಿಕೊಳ್ಳಲಿಲ್ಲ. ಕಡೆಗೆ ಆತ ಸ್ಪಾ, ಸಲೂನ್ ನಲ್ಲಿನ ಇತರೆ ಸಿಬ್ಬಂದಿಗಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದ. ನನ್ನ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ನಾನವನನ್ನು ಕೆಲಸದಿಂದ ವಜಾ ಮಾಡಿದೆ. ಫೆಬ್ರವರಿಯಲ್ಲಿ ಆತ ಕೆಲಸ ಬಿಟ್ಟು ತೆರಳಿದ" ದೀಪಾಲಿ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಹೀಗೆ ಕೆಲಸ ಕಳೆದುಕೊಂಡ ಚಂದನ್ ದೀಪಾಲಿಗೆ ಪದೇ ಪದೇ ಕರೆ ಮಾಡಿ ನಿಂದಿಸುತ್ತಿದ್ದ. ಕೆಟ್ಟ ಭಾಷೆಗಳನ್ನು ಬಳಸಿ ಬೈಯ್ದಾಡುತ್ತಿದ್ದ. ಅಲ್ಲದೆ ಸ್ಪಾ ಹಾಗು ಸೆಲೂನ್ ಬಗ್ಗೆ ನಕಾರಾತ್ಮಕ ಭಾವನೆ ಬರುವಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕುತ್ತಿದ್ದ. "ಸೆಲೂನ್ ಮಾಲೀಕಳು ಚೀಪ್ ಮೆಂಟಾಲಿಟಿ ಹೊಂದಿದ್ದಾರೆ, ಅವರು ತಮ್ಮ ಸಿಬ್ಬಂದಿಗಳಿಗೆ ಸರಿಯಾಗಿ ವೇತನ ಪಾವತಿಸುವುದಿಲ್ಲ" ಎಂದೆಲ್ಲಾ ಬರೆಯಲು ಪ್ರಾರಂಭಿಸಿದ್ದ. ಅಲ್ಲದೆ ನನ್ನ ಬಗ್ಗೆ ಕೆಟ್ಟ ಭಾಷೆಗಳನ್ನು ಬಳಸಿ ಪೋಸ್ಟ್ ಬರೆದಿದ್ದದ್ದು ಇದೆ"
"ನಾನು ಸಾಕಷ್ಟು ಕೇಳಿಕೊಂಡರೂ ಆತ ತಾನು ಕೆಟ್ಟದಾಗಿ ಪೋಸ್ಟ್ ಮಾಡುವುದು ಬಿಟ್ಟಿಲ್ಲ, ನನ್ನ ವಾಟ್ಸ್ ಅಪ್ ಗೆ ಅಸಭ್ಯ ಸಂದೇಶಗಳನ್ನು ಕಳಿಸಿದ್ದ. ಇಷ್ಟೇಲ್ಲವನ್ನು ಒಂದು ತಿಂಗಳಿನಿಂದ ಸಹಿಸಿಕೊಂಡು ಬಳಿಕ ನಾನು ಪೊಲೀಸರಿಗೆ ದೂರು ನೀಡಿದೆ" ದೀಪಾಲಿ ಹೇಳಿದ್ದಾರೆ.
ದೂರಿನ ಸಂಬಂಧ ತನಿಖೆ ಕೈಗೊಂಡಿದ್ದೇವೆ. ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೋಲೀಸರು ಹೇಳಿದ್ದಾರೆ.