ಬೆಂಗಳೂರು : ಮೆಟ್ರೋ ರೈಲು ನಿಲ್ದಾಣದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಕಲ್ಪಿಸಿರುವ ಪೀಡರ್ ಬಸ್ ಗಳ ಕಾರ್ಯಾಚರಣೆಯಿಂದ ಪ್ರತಿನಿತ್ಯ ಅಧಿಕ ಪ್ರಮಾಣದ ನಷ್ಟ ಉಂಟಾಗುತ್ತಿದ್ದು, ಕೆಲ ತಿಂಗಳುಗಳ ಹಿಂದೆ 37 ಬಸ್ಸುಗಳನ್ನು ಬಿಎಂಟಿಸಿ ಹಿಂದಕ್ಕೆ ಪಡೆದುಕೊಂಡಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್ಸುಗಳನ್ನು ಹಿಂದಕ್ಕೆ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ಬಿಎಂಟಿಸಿಯ ಹಿರಿಯ ಅಧಿಕಾರಿಗಳ ಪ್ರಕಾರ , ಅಧಿಕ ಪ್ರಮಾಣದ ನಷ್ಟದ ಹಿನ್ನೆಲೆಯಲ್ಲಿ ಪೀಡರ್ ಬಸ್ಸುಗಳ ಸಂಖ್ಯೆಯನ್ನು 192 ರಿಂದ 155 ಕ್ಕೆ ಇಳಿಸಲಾಗಿದೆ. ಮಾರ್ಗ ಬದಲಾವಣೆ ಮಾಡುವುದಿಲ್ಲ. ಆದರೆ, ವೇಳೆಯನ್ನು ಬದಲಾಯಿಸಲಾಗುತ್ತದೆ. ಪ್ರತಿ 30 ನಿಮಿಷಕ್ಕೆ ಸಂಚರಿಸುತ್ತಿದ್ದ ಬಸ್ಸುಗಳನ್ನು 45 ನಿಮಿಷಕ್ಕೆ ನಿಗದಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಪೀಡರ್ ಬಸ್ಸುಗಳಿಂದ ತುಂಬಾ ನಷ್ಟ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಪೀಡರ್ ಬಸ್ಸುಗಳ ಸೇವೆಯನ್ನು ಕಡಿಮೆಗೊಳಿಸಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
8 ಗಂಟೆಗಳ ಪಾಳಿಯಲ್ಲಿ ಬಸ್ಸು ಕಾರ್ಯಾಚರಣೆಗೆ 7 ಸಾವಿರ ರೂ. ವೆಚ್ಚಮಾಡಲಾಗುತ್ತದೆ. ಆದರೆ, ಕೆಲ ಬಸ್ಸುಗಳಿಂದ ಪ್ರತಿ ಪಾಳಿಯಲ್ಲೂ 3 ಸಾವಿರದಿಂದ 4 ಸಾವಿರ ರೂ ಆದಾಯ ಬರುತ್ತಿದೆ. ಪ್ರತಿದಿನ ಶೇ.50 ರಷ್ಟು ನಷ್ಟ ಅನುಭವಿಸಲಾಗುತ್ತಿದೆ. ಇದು ಬಸ್ಸುಗಳನ್ನು ಓಡಿಸಲು ಕಷ್ಟಕರವಾಗಿ ಪರಿಣಮಿಸಿದೆ ಎಂದು ಅವರು ಹೇಳಿದ್ದಾರೆ.
ಈ ನಡುವೆ ಆಗಿರುವ ನಷ್ಟದಲ್ಲಿ ಸ್ವಲ್ಪ ಭಾಗವನ್ನು ಹಂಚಿಕೊಳ್ಳುವಂತೆ ಬಿಎಂಆರ್ ಸಿಎಲ್ ನ್ನು ಬಿಎಂಟಿಸಿ ಹಲವು ಬಾರಿ ಕೇಳಿಕೊಂಡಿದೆ. ಮೆಟ್ರೋ, ಬಿಎಂಟಿಸಿ ಬೇರೆ ಬೇರೆಯಾಗಿದ್ದು, ಮೆಟ್ರೋ ನಿಲ್ದಾಣದವರೆವಿಗೂ ಬಿಎಂಟಿಸಿ ಸೇವೆ ಒದಗಿಸುವಂತೆ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಹೇಳುತ್ತಾರೆ.