ನಗರದಲ್ಲಿ ಮುಂದುವರೆದ ಗಾಳಿ-ಮಳೆ ಅರ್ಭಟ: ಹಲವೆಡೆ ಸಾಧಾರಣ ಮಳೆ
ಬೆಂಗಳೂರು; ನಗರದಲ್ಲಿ ಗಾಳಿ ಮಳೆಯ ಆರ್ಭಟ ಭಾನುವಾರ ಕೂಡ ಮುಂದುವರೆದಿದ್ದು, ಹಲವೆಡೆ ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತೆ ಮಾಡಿತ್ತು.
ಸಂಜೆ ಹೊತ್ತಿಗೆ ಮಳೆ ಆರಂಭಕ್ಕೂ ಮುನ್ನ ಆರ್ಭಟಿಸಿದ ಬಿರುಗಾಳಇಯಿಂದ ರಸ್ತೆಯಲ್ಲಿ ಧೂಳು, ಸಣ್ಣಪುಟ್ಟ ಕಸ ಜನರ ಮುಖಕ್ಕೆ ರಾಚಿತು. ರಸ್ತೆ ಬದಿಯಲ್ಲಿದ್ದ ಅಂಗಡಿಗಳು ನುಗ್ಗಿದರೆ, ಬಸ್ಸು, ಕಾರಿನಂತಹ ವಾಹನಗಳ ಕಿಟಕಿಗಳ ಮೂಲಕ ಒಳಗೆ ಧೂಳು ನುಗ್ಗಿ ಪ್ರಯಾಣಿಕರು ಕಿರಿಕಿರಿಗೊಂಡರು.
ಪ್ರಮುಖವಾಗಿ ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಹಾಗಿದ್ದರೂ ಗಾಳಿಯ ರಭಸಕ್ಕೆ ಧೂಳಿನ ತ್ಯಾಜ್ಯ ಮುಖ, ಮೈಗೆ ರಾಚಿದ್ದರಿಂದ ಕೆಲವರು ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಗಾಳಿ ನಿಂತ ಬಳಿಕ ಮುಂದಕ್ಕೆ ಸಾಗಿದ ದೃಶ್ಯಗಳು ಕಂಡುಬಂತು.
ಬಿರುಗಾಳಿ ಎದ್ದ ಕೆಲವೇ ಕ್ಷಣಗಳಲ್ಲಿ ನಗರದ ಹಲವೆಡೆ ಸಾಧಾರಣ ಮಳೆ ಸುರಿಯಿತು. ಮೆಜೆಸ್ಟಿಕ್, ಶಿವಾನಂದ ವೃತ್ತ, ಎಂ.ಜಿ.ರಸ್ತೆ, ಮೈಸೂರು ರಸ್ತೆ, ಲಾಲ್ ಬಾಗ್, ಬಸವನಗುಡಿ, ಉತ್ತರಹಳ್ಳಿ, ಕುಮಾರಸ್ವಾಮಿ ಲೇಔಟ್, ಯಲಹಂಕ, ರಾಜರಾಜೇಶ್ವರಿನಗರ, ಕೆಂಗೇರಿ ಸೇರಿದಂತೆ ಹಲವೆಡೆ ಹಗುರ ಹಾಗೂ ಸಾಧಾರಣೆ ಮಳೆಯಾಗಿದೆ.
ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿ ಹರಿದಿದ್ದರಿಂದ ವಾಹನ ಸಂಚಾರ ಮಂದಗತಿಗಿಳಿಯಿತು. ಇದರ ಪರಿಣಾಮ ಹಲವೆಡೆ ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ ವಾಹನ ಸವಾರರು ಪರದಾಟುವಂತಾಗಿತ್ತು. ಕೆಲಸ ಮುಗಿಸಿ ಮನೆಯ ಕಡೆಗೆ ಹೊರಟವರು ನಿಗದಿತ ಸಮಯಕ್ಕಿಂತ ಗಂಟೆ ಕಾಲ ತಡವಾಗಿ ಮನೆಗಳಿಗೆ ತಲುಪುವಂತಾಯಿತು.
ಮಿಲ್ಲರ್ ರ್ಸತ್ಯೆ ಐಜಿ ಕಚೇರಿ ಬಳಿ, ಬನಶಂಕರಿ, ಹನುಮಂತನಗರ, ಡಬರ್ ರಸ್ತೆ, ಬಾಣಸವಾಡಿ ರೈಲ್ವೇ ನಿಲ್ದಾಳ ಬಳಿ, ಹಳೇ ಮದ್ರಾಸ್ ರಸ್ತೆ, ಕಮಾಂಡೋ ಆಸ್ಪತ್ರೆ ಸೇರಿದಂತೆ ಒಟ್ಟು 8 ಕಡೆಗಳಲ್ಲಿ ಮರ ಹಾಗೂ ಅನೇಕ ಮರದ ಕೊಂಬೆಗಳು ಧರೆಗುರುಳಿದವು. ಇದರಿಂದ ಆ ಭಾಗದ ರಸ್ತೆಗಳಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಪೂರ್ವ ವಲಯದ ದೊಡ್ಡಗುಬ್ಬಿಯಲ್ಲಿ ಅತೀ ಹೆಚ್ಚು 20 ಮಿ.ಮೀ ಗರಿಷ್ಟ ಮಳೆಯಾಗಿದೆ ಎಂದು ತಿಳಿದುಬಂದಿದೆ. ಉಳಿದಂತೆ ದೊಡ್ಡಬಾನಹಳ್ಳಿ 4.5, ಕಣ್ಣೂರು 8.5, ಹಾಲನಾಯಕನಹಳ್ಳಿ 3.5 ವರ್ತೂರು 3, ಬಿರಹಳ್ಳಿ 8, ಕೆ.ಆರ್.ಪುರ 8.5, ದಕ್ಷಿಣ ವಲಯದ ಬಸವನಗುಡಿ 6.5, ಕಾಟನ್ ಪೇಟೆ 4, ಉತ್ತರಹಳ್ಳಿ 5, ಕುಮಾರಸ್ವಾಮಿ ಲೇ ಐಟ್ 4.5, ಉತ್ತರ ವಲಯದ ಯಲಹಂಕ 8, ಲಾಲ್ ಬಾಗ್ 2, ವಡೇರಹಳ್ಳಿ, ಅಗ್ರಹಾರ, ದಾಸರಹಳ್ಳಿ, ದೊಡ್ಡಜಾಲ, ಬಾಗಲೂರು ಮತ್ತಿತರೆಡೆ 1 ರಿಂದ 3 ಮಿ.ಮೀ ವರೆಗೆ ಮಳೆಯಾಗಿದೆ.
ಸೋಮವಾರದಿಂದ ಗುರುವಾರ (ಏ,26)ರವರೆಗೂ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನು ಶುಕ್ರವಾರ ಹಾಗೂ ಶನಿವಾರ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಮುಂಬರುವ ದಿನಗಳಲ್ಲಿ ಕನಿಷ್ಟ ಉಷ್ಣಾಂಶ 22 ಡಿಗ್ರಿ ಸೆಲ್ಷಿಯಸ್ ನಿಂದ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಷಿಯನ್'ನಷ್ಟಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.