ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಪ್ರದೇಶದಲ್ಲಿ ಮಂಗಳವಾರ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.
ನಗರದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು, ಎಲೆಕ್ಟ್ರಿಕ್ ಕಂಬಗಳು ಧರೆಗುರುಳಿದ ಪರಿಣಾಮ ವಾಹನ ದಟ್ಟಣೆ ಉಂಟಾಗಿದೆ.
ಮಲ್ಲೇಶ್ವರಂ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ಗಾಯತ್ರಿನಗರ, ಸಹಕಾರ ನಗರ, ಜೆ.ಪಿ.ಪಾರ್ಕ್, ಮಹಾಲಕ್ಷ್ಮಿ ಲೇಔಟ್, ಸಂಜಯನಗರ, ಯಶವಂತಪುರ, ಗೊರಗುಂಟೆಪಾಳ್ಯ, ಜಾಲಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯು ಜೋರಾಗಿತ್ತು. ಅದರ ಜತೆಗೆ ಬಿರುಗಾಳಿಯ ಆರ್ಭಟ ಹೆಚ್ಚಾಗಿತ್ತು.
ಬಸವೇಶ್ವರ ನಗರದಲ್ಲಿ ವಿದ್ಯುತ್ ಕಂಬವೊಂದು ಕಾರಿನ ಮೇಲೆ ಉರುಳಿಬಿದ್ದಿದ್ದು, ಅದರ ಸಮೀಪದಲ್ಲೇ ಮತ್ತೊಂದು ಮರ ಕಾರೊಂದರ ಮೇಲೆ ಬಿದ್ದಿದೆ.
ಮಲ್ಲೇಶ್ವರದ ಮುಖ್ಯರಸ್ತೆ, ಭಾರತೀಯ ವಿಜ್ಞಾನ ಸಂಸ್ಥೆ, ಸರ್ಕಲ್ ಮಾರಮ್ಮ ದೇವಸ್ಥಾನ ಎದುರಿನ ರಸ್ತೆ ಹಾಗೂ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಉಂಟಾಯಿತು. ಮೇಖ್ರಿ ಸರ್ಕಲ್ ಹಾಗೂ ಪ್ರೌಢಶಿಕ್ಷಣ ಮಂಡಳಿ ಎದುರಿನ ರಸ್ತೆಯಲ್ಲಿ ಮರದ ಕೊಂಬೆಗಳು ಬಿದ್ದು ವಾಹನಗಳ ಓಡಾಟಕ್ಕೆ ಅಡ್ಡಿಯಾಗಿತ್ತು.