ಬೆಂಗಳೂರು: ಮಾಡುತ್ತಿರುವ ಎಲ್ಲಾ ಕೆಲಸಗಳನ್ನು ಬಿಟ್ಟು ಮಧ್ಯಾಹ್ನದೊಳಗೆ ನಗರದಲ್ಲಿರುವ ಅನಧಿಕೃತ ಬ್ಯಾನರ್, ಫ್ಲೆಕ್ಸ್ ತೆರವುಗೊಳಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಧ್ಯಾಹ್ನದೊಳಗೆ ನಗರದಲ್ಲಿರುವ ಎಲ್ಲಾ ಫ್ಲೆಕ್ಸ್ ಬಂಟಿಂಗ್ಸ್ ತೆಗೆಸಬೇಕು ಎಂದು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಬಿಬಿಎಂಪಿಗೆ ಖಡಕ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಆಯುಕ್ತರು ಈ ಘೋಷಣೆ ಹೊರಡಿಸಿದ್ದಾರೆ.
ನಗರದಲ್ಲಿ ಬ್ಯಾನರ್ ಸಮಸ್ಯೆ ಹೆಚ್ಚಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಹೈಕೋರ್ಟ್ ಸಲ್ಲಿಸಲಾಗಿದೆ. ಇಂದು ಈ ಅರ್ಜಿಯ ವಿಚಾರಣೆ ನಡೆಯಬೇಕಿದೆ. ಬುಧವಾರ ಬೆಳಗ್ಗೆ ಕೋರ್ಟ್ಕಲಾಪ ಆರಂಭವಾಗುತ್ತಿದ್ದಂತೆ ಅರ್ಜಿ ಕುರಿತು ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿಗಳು, ಅರ್ಜಿ ವಿಚಾರಣೆಗೆ ಬರುವ ಮೊದಲೇ ಫ್ಲೆಕ್ಸ್ ಮತ್ತು ಬ್ಯಾನರ್ ತೆರವುಗೊಳಿಸಬೇಕು. ಈ ಕುರಿತು ನಾನೇ ಖುದ್ದಾಗಿ ಪರಿಶೀಲಿಸುತ್ತೇನೆ ಎಂದು ಬಿಬಿಎಂಪಿ ವಕೀಲರಿಗೆ ಸೂಚಿಸಿದರು.
ಕೂಡಲೇ ಕಾರ್ಯ ಪ್ರವೃತ್ತರಾದ ಆಯುಕ್ತ ಮಂಜುನಾಥ್ ಪ್ರಸಾದ್ ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿ, ಬಿಬಿಎಂಪಿಯ ಎಲ್ಲಾ ಎಂಜಿನಿಯರ್, ಅಸಿಸ್ಟೆಂಟ್ ಎಂಜಿನೀಯರ್, ಕಾರ್ಯಕಾರಿ ಅಭಿಯಂತರರಿಗೆ ಸೂಚನೆ ನೀಡಿದ್ದಾರೆ. ಎಲ್ಲಾ ಅಧಿಕಾರಿಗಳು ಬೇರೆ ಕೆಲಸ ನಿಲ್ಲಿಸಿ ಕೂಡಲೇ ಫ್ಲೆಕ್ಸ್ ತೆಗೆಯುವ ಕಾರ್ಯಾಚರಣೆಗಿಳಿಯಬೇಕು ಎಂದು ಸೂಚಿಸಿದ್ದಾರೆ.
ನಾನು ಮಧ್ಯಾಹ್ನ 2.30 ರೊಳಗೆ ಕೋರ್ಟ್ ಗೆ ಹಾಜರಾಗಬೇಕು, ಅಷ್ಟರಲ್ಲಿ ಎಲ್ಲಾ ಫ್ಲೆಕ್ಸ್ ಬಂಟಿಂಗ್ಸ್ ತೆರವುಗೊಂಡಿರಬೇಕು, ಒಂದು ವೇಳೆ ಈ ಕೆಲಸ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.