ರಾಜ್ಯ

ನನ್ನ ಅಥವಾ ಕುಮಾರಸ್ವಾಮಿ ಜೀವಿತಾವಧಿಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಸಾಧ್ಯವಿಲ್ಲ: ದೇವೇಗೌಡ

Raghavendra Adiga
ನವದೆಹಲಿ: ನಾನು ಅಥವಾ ನನ್ನ ಪುತ್ರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೀವಿತಾವಧಿಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಮುಖಂಡ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವುದಕ್ಕೆ ನಮ್ಮ ಬೆಂಬಲವಿಲ್ಲ, ಈ ಬೇಡಿಕೆಗೆ ಬಿಜೆಪಿ ಸಹ  ಪ್ರಚೋದನೆ ನೀಡಬಾರದೆಂದು ಅವರು ಮನವಿ ಮಾಡಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಆಗಸ್ಟ್ 2ರಂದು 13 ಜಿಲ್ಲೆಗಳಲ್ಲಿ ಬಂದ್ ಗೆ ಕರೆ ನೀಡಿದ್ದ ತರುವಾಯ ದೇವೇಗೌಡ ಈ ಪ್ರತಿಕ್ರಿಯೆ ನಿಡಿದ್ದಾರೆ.
"ರಾಜ್ಯ ಬಜೆಟ್ ನಲ್ಲಿ ನಿಧಿ ಹಂಚುವ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಯಾವ ಅನ್ಯಾಯವಾಗಿಲ್ಲ" ಎಂದಿರುವ ದೇವೇಗೌಡ ಬಿಜೆಪಿ ನಾಯಕ ಯಡಿಯೂರಪ್ಪ  "ದುರುದ್ದೇಶಪೂರಿತ ಪ್ರಚಾರ"ದ ಮೂಲಕ  ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು. ಯಡಿಯೂರಪ್ಪ ಅವರ ಪ್ರಚೋದನೆಗೆ ಜನರು ಬೆಲೆ ನೀಡಲಾರರು.ಇನ್ನೇನಾದರೂ ಕೆಲ ಮಂದಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕೆಂದು ಬೇಡಿಕೆ ಇಟ್ಟದ್ದಾದರೆ ಅಂತಹವರಿಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ - ನನ್ನ ಹಾಗೂ ನನ್ನ ಮಗ, ಮುಖ್ಯಮಂತ್ರಿ ಕುಮಾರಸ್ವಾಮಿ ಜೀವಿತಾವಧಿಯಲ್ಲಿ ಇದು ಸಾಧ್ಯವಿಲ್ಲ. ಎಂದು ಅವರು ಹೇಳಿದ್ದಾರೆ.
ಅತಿ ಹೆಚ್ಚು ಸ್ಥಾನ ಗಳಿಸಿಯೂ ಸರ್ಕಾರ ರಚನೆ ಮಾಡಲಾಗದೆ ಹೋದದ್ದಕ್ಕೆ ಬಿಜೆಪಿ ನಾಯಕ ಯಡಿಯೂರಪ್ಪ ಅವರಿಗೆ ನಿರಾಶೆಯಾಗಿದ್ದು ಅದೀಗ ಕೋಪಕ್ಕೆ ಕಾರಣವಾಗಿದೆ. ಇದೇ ಕೋಪದಿಂದ ಅವರು ಉತ್ತರ ಕರ್ನಾಟಕದ ಜನರಿಗೆ ಪ್ರತ್ಯೇಕ ಕರ್ನಾಟಕಕ್ಕಾಗಿ ಪ್ರಚೋದನೆ ಕೊಡುತ್ತಿದ್ದಾರೆ. ಅಲ್ಲದೆ ರಾಜ್ಯ ಬಜೆಟ್, ರೈತರ ಸಾಲ ಮನ್ನಾ ಹಾಗೂ ಇಅತ್ರೆ ವಿಚಾರಗಳನ್ನಿಟ್ಟುಕೊಂಡು ಅವರು ಜನರನ್ನು ಹೆದರಿಸುತ್ತಿದ್ದಾರೆ. ಇದೆಲ್ಲವೂ ಅವರ ರಾಜಕೀಯ ಲಾಭಕ್ಕಾಗಿಯೇ ಆಗಿದೆ ಎಂದು ದೇವೇಗೌಡ ಆರೋಪಿಸಿದರು.
ಅನೇಕ ಮಹನೀಯರು ಹೋರಾಟ ನಡೆಸಿ ಕರ್ನಾಟಕ ಏಕೀಕರಣ ಮಾಡಿದ್ದಾರೆ.ಏಕೀಕರಣಕ್ಕಾಗಿ ಅವರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದರು. ಹೀಗಾಗಿ ಪ್ರತ್ಯೇಕತೆ ಕೂಗನ್ನು ನಿಲ್ಲಿಸಿ ಮತ್ತು ಪ್ರಸ್ತುತ ಸರ್ಕಾರದ ಮೇಲೆ ಭರವಸೆ ಇಡಿ ಎಂದು ಮಾಜಿ ಪ್ರಧಾನಿಗಳು ಮನವಿ ಮಾಡಿದರು. ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಕೆಲವು ಪ್ರಮುಖ ಸರ್ಕಾರಿ ಇಲಾಖೆಗಳನ್ನು ಶಿಫ್ಟ್ ಮಾಡುವುದಾಗಿ ಕುಮಾರಸ್ವಾಮಿ ಇದಾಗಲೇ ಹೇಳಿದ್ದನ್ನು ದೇವೇಗೌಡ ಪುನರುಚ್ಚರಿಸಿದ್ದಾರೆ.
SCROLL FOR NEXT