ವಿವಾದ ಬಗೆಹರಿಸಲು ಬೆಂಗಳೂರು ವಿ.ವಿಗೆ 15 ದಿನಗಳ ಅವಕಾಶ ನೀಡಿದ ಸಚಿವರು
ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಭಾಗಗಳನ್ನಾಗಿ ಮಾಡಿದ ನಂತರ ಉಂಟಾದ ವಿವಾದವನ್ನು ...
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಭಾಗಗಳನ್ನಾಗಿ ಮಾಡಿದ ನಂತರ ಉಂಟಾದ ವಿವಾದವನ್ನು 15 ದಿನಗಳಲ್ಲಿ ಬಗೆಹರಿಸಿಕೊಳ್ಳುವಂತೆ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಹೇಳಿದ್ದಾರೆ.
ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿ, ಬೆಂಗಳೂರು ನಾರ್ತ್ ಯೂನಿವರ್ಸಿಟಿ ಮಟ್ಟು ಬೆಂಗಳೂರು ಯೂನಿವರ್ಸಿಟಿಗಳ ಮುಖ್ಯಸ್ಥರು ಒಟ್ಟಿಗೆ ಕುಳಿತು ಮುಂದಿನ 15 ದಿನಗಳಲ್ಲಿ ಸಮಸ್ಯೆ ಬಗೆಹರಿಸಬೇಕೆಂದು ಆದೇಶ ನೀಡಿದ್ದಾರೆ.
ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು, ರಿಜಿಸ್ಟ್ರಾರ್ ಮತ್ತು ಹಣಕಾಸು ಅಧಿಕಾರಿಗಳ ಜೊತೆ ಪರಾಮರ್ಶೆ ಸಭೆ ನಡೆಸಿದ ನಂತರ ಮಾತನಾಡಿದ ಸಚಿವರು, ನಾವು ಎಲ್ಲಾ ವಿಷಯಗಳ ಕುರಿತು ಚರ್ಚಿಸಿದ್ದೇವೆ, ಇನ್ನು 15 ದಿನಗಳೊಳಗೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಹೇಳಿದ್ದೇನೆ ಎಂದರು.
ಮೂರು ವರ್ಷಗಳ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಭಾಗಗಳಾಗಿ ವಿಂಗಡಿಸಿದ ನಂತರ ಉಪ ಕುಲಪತಿಗಳ ನೇಮಕವನ್ನು ಕಳೆದ ವರ್ಷ ಮಾಡಲಾಯಿತು. ಹೊಸ ವಿಶ್ವವಿದ್ಯಾಲಯಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹೊಸ ಕೋರ್ಸ್ ಗಳ ಆರಂಭಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ವಿಶ್ವವಿದ್ಯಾಲಯಗಳ ಅಧಿಕಾರಿಗಳು ಕೆಲವು ಆಸ್ತಿಗಳ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಆಂತರಿಕವಾಗಿ ಕಿತ್ತಾಡಿಕೊಳ್ಳುತ್ತಿದ್ದಾರೆ ಎಂದರು.
ಪತ್ರಿಕೋದ್ಯಮ ವಿಭಾಗ ಮುಚ್ಚದಂತೆ ಮನವಿ: ಸೆಂಟ್ರಲ್ ಕಾಲೇಜು ಕ್ಯಾಂಪಸ್ ನಲ್ಲಿ ಈಗಿರುವ ಯಾವುದೇ ಸ್ನಾತಕೋತ್ತರ ಪದವಿ ಕೋರ್ಸ್ ಗಳನ್ನು ಮುಚ್ಚದಂತೆ ಸರ್ಕಾರ ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿಗೆ ಹೇಳಿದೆ. ಪತ್ರಿಕೋದ್ಯಮ ಕೋರ್ಸ್ ನ್ನು ಈ ವರ್ಷ ಮುಚ್ಚಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಅತಿಥಿ ಉಪನ್ಯಾಸಕರ ಮೂಲಕ ಕೋರ್ಸ್ ಗಳನ್ನು ನಡೆಸುವಂತೆ ಹೇಳಿದ್ದಾರೆ.