ಉಡುಪಿ: ಗುಡಿಸಿಲಿನಲ್ಲಿ ವಾಸಿಸುತ್ತಿದ್ದ 103 ವರ್ಷದ ಅಜ್ಜಿಗೆ ಗ್ರಾಮಸ್ಥರೇ ಸೇರಿ ಮನೆ ನಿರ್ಮಿಸಿಕೊಟ್ಟಿರುವಂತ ಅಪರೂಪದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ಬ್ರಹ್ಮಾವರ ಸಮೀಪವಿರುವ ಕರ್ಜೆ ಗ್ರಾಮದಲ್ಲಿ 103 ವರ್ಷದ ಸರಸಜ್ಜಿ ಇದುವರೆಗೂ ಒಬ್ಬಂಟಿಯಾಗಿ ಗುಡಿಸಲಿನಲ್ಲಿ ವಾಸಿಸುತ್ತಿದ್ದರು, ಬಾಲಕೃಷ್ಣ ಶೆಟ್ಟಿ ಹಳುವಳ್ಳಿ ಎಂಬುವರು ಅಜ್ಜಿಗೆ ಹೊಸದೊಂದು ಮನೆ ನಿರ್ಮಿಸಿಕೊಟ್ಟಿದ್ದಾರೆ.
ಮನೆ ನಿರ್ಮಿಸಲು ಸುಮಾರು ಒಂದೂವರೆ ಲಕ್ಷ ಖರ್ಚಾಗಿದೆ. ಮನೆ ನಿರ್ಮಾಣಕ್ಕೆ ಬಾಲಕೃಷ್ಣ ಶೆಟ್ಟಿ ಮತ್ತು ಗ್ರಾಮಸ್ಥರು ಹಣ ಖರ್ಚು ಮಾಡಿದ್ದಾರೆ. ಸರಸಜ್ಜಿಗೆ ಕನಿಷ್ಠ ಸೌಲಭ್ಯ ಒದಗಿಸಬೇಕು ಎಂಬುದು ಬಾಲಕೃಷ್ಣ ಅವರ ಬಯಕೆಯಾಗಿತ್ತು.
103 ವರ್ಷದ ಸರಸಜ್ಜಿ ಯಾರೋಬ್ಬರ ಸಹಾಯ ಬೇಡದೇ ಸ್ವಾಭಿಮಾನದಿಂದ ಬದುಕುತ್ತಿರುವ ಮಹಿಳೆಯಾಗಿದ್ದಾರೆ, ಆದರೆ ಆಕೆಗೆ ಶೌಚಾಲಯ, ಸುರಕ್ಷಿತ ಮನೆ, ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕೆಂಬುದು ಗ್ರಾಮಸ್ಥರ ಬಯಕೆಯಾಗಿತ್ತು ಎಂದು ಸ್ಥಳೀಯರಾದ ದೇವು ನಾಯಕ್ ತಿಳಿಸಿದ್ದಾರೆ.
ತಮಗೆ ಹೊಸ ಮನೆ ಬೇಡ ಎಂದು ಆಕೆ ನಿರಾಕರಿಸಿದ್ದರು,ಆದರೆ ಗ್ರಾಮಸ್ಥರು ಅವರ ಮನವೊಲಿಸಿದ ನಂತರ ಅವರು ಒಪ್ಪಿಕೊಂಡಿದ್ದಾರೆ. ಸರ್ಕಾರದ ಅಥವಾ ಯಾರದೇ ಸಹಾಯ ಪಡೆಯದೇ ಸ್ವತಂತ್ರ್ಯವಾಗಿ ಬದುಕುಬೇಕೆಂಬುದು ಸರಸಜ್ಜಿಯ ಗುರಿಯಾಗಿದೆ.
ಆಕೆಯ ಗುಡಿಸಲಿಗೆ ಭೇಟಿ ನೀಡಿದವರು, ಸರ್ಕಾರದ ಯೋಜನೆಗಳು ಆಕೆಗೆ ಇನ್ನೂ ತಲುಪಿಲ್ಲ ಏಕೆ ಎಂದು ಆಶ್ಚರ್ಯ ಪಟ್ಟಿದ್ದರು. ಸರಸಜ್ಜಿ ಬಳಿ, ಆಧಾರ್ ಕಾರ್ಡ್, ಪಡಿತರ ಚೀಟಿಸ ಹಾಗೂ ಚುನಾವಣಾ ಗುರುತಿನ ಚೀಟಿ ಕೂಡ ಇಲ್ಲ, ಅವೆಲ್ಲಾ ನನಗೆ ಏಕೆ ಬೇಕು ಎಂದು ಸರಸಜ್ಜಿ ಪ್ರಶ್ನಿಸುತ್ತಾರೆ, ಅವುಗಳಿಲ್ಲದೇ ನಾನು ದಶಕಗಳಿಂದ ಬದುಕಿದ್ದೇನೆ ಎಂದು ಹೇಳಿದ್ದಾರೆ.
ಆಕೆ ಮೊದಲಿಗೆ ಬ್ರಹ್ಮಾವರ ತಹಶೀಲ್ದಾರ್ ಗೆ ಅರ್ಜಿ ಹಾಕಿದರೇ, ಆಕೆಗೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸಿಗುತ್ತದೆ, ಅದಾದ ನಂತರ ನಾವು ಅವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತದೆ. ಒಮ್ಮೆ ಬಿಪಿಎಲ್ ಕಾರ್ಡ್ ಸಿಕ್ಕರೇ ಪ್ರತಿ ತಿಂಗಳು ಉಚಿತವಾಗಿ 7 ಕೆಜಿ ಅಕ್ಕಿ, ಹಾಗೂ 38 ರು.ಗೆತೊಗರಿ ಬೇಳೆ ಸಿಗುತ್ತದೆ. ಸರಸಜ್ಜಿ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಕೂಡಲೇ ಎಲ್ಲಾ ಸೌಲಭ್ಯ ಸಿಗುವಂತೆ ಮಾಡುತ್ತೇವೆ ಎಂದು ಉಡುಪಿ ಉಪ ನಿರ್ದೇಶಕ ಎಂ.ಆರ್ ಭಟ್ ಹೇಳಿದ್ದಾರೆ,
ಆದರೆ ಭಟ್ ಅವರ ಈ ಮಾತಿಗೆ ಪ್ರತಿಕ್ರಿಯಿಸಿರುವ ಅಜ್ಜಿ, ನನಗೆ ಸರ್ಕಾರದ ಯಾವುದೇ ಸೌಲಭ್ಯ ಬೇಡ,ನನಗೆ ಶಾಂತಿ ನೆಮ್ಮದಿ ಬೇಕು. ಇಷ್ಟು ವರ್ಷ ಸರ್ಕಾರದ ಸೌಲಭ್ಯ ಪಡೆಯದೇ ಬದುಕಿದ್ದೇನೆ, ನನಗೆ ಯಾವುದೇ ಸೌಲಭ್ಯ ಬೇಡ ಎಂದು ಖಟಕ್ಕಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics