ರಾಜ್ಯ

ಬೆಳಗಾವಿಯ ಕೆಶಿಪ್ ಕಚೇರಿ ಹಾಸನಕ್ಕೆ ಸ್ಥಳಾಂತರ, ಉತ್ತರ ಕರ್ನಾಟಕಕ್ಕೆ ಮತ್ತೆ ಅನ್ಯಾಯ?

Lingaraj Badiger
ಬೆಳಗಾವಿ: ಬೆಳಗಾವಿಯನ್ನು ಎರಡನೇ ರಾಜಧಾನಿ ಮಾಡುವುದಾಗಿ ಹಾಗೂ ಸುವರ್ಣ ಸೌಧಕ್ಕೆ ಬೆಂಗಳೂರಿನ ಹಲವು ಕಚೇರಿಗಳನ್ನು ಸ್ಥಳಾಂತರ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಈಗ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು, ಬೆಳಗಾವಿಯಲ್ಲಿರುವ ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ(ಕೆಶಿಪ್)ಯ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರ ಮಾಡಲು ಆದೇಶಿಸಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರ ಜುಲೈ 27, 2018ರಂದು ಆದೇಶ ಹೊರಡಿಸಿದ್ದು, ಬೆಳಗಾವಿ ನಗರದಲ್ಲಿರುವ ಕೆಶಿಪ್ ವಿಭಾಗದ ಮಟ್ಟದ ಕಚೇರಿಯನ್ನು ಹಾಸನಕ್ಕೆ ಹಾಗೂ ಉಪ ವಿಭಾಗೀಯ ಕಚೇರಿಯನ್ನು ಬೆಳಗಾವಿಯಿಂದ ಮಡಿಕೇರಿಗೆ ಸ್ಥಳಾಂತರಕ್ಕೆ ಸೂಚಿಸಲಾಗಿದೆ.
ಇನ್ನೂ ಸಕಲೇಶಪುರದ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಕಚೇರಿಯನ್ನು  ಹೊಳೆನರಸೀಪುರಕ್ಕೆ ಶಿಫ್ಟ್ ಮಾಡಲು ಹಾಗೂ ಬಸವನಬಾಗೇವಾಡಿಯ ಕೆಶಿಪ್ ಉಪವಿಭಾಗ ಕಚೇರಿಯನ್ನು ಬೇಲೂರಿಗೆ ಸ್ಥಳಾಂತರಿಸಲು ಆದೇಶಿಸಲಾಗಿದೆ. ಅಲ್ಲದೆ ಶಿವಮೊಗ್ಗ ಲೋಕೋಪಯೋಗಿ ವಿಶೇಷ ಉಪ ವಿಭಾಗೀಯ ಕಚೇರಿಯನ್ನು ಅರಸೀಕೆರೆಗೆ ಶಿಫ್ಟ್ ಮಾಡಲು ಸೂಚಿಸಲಾಗಿದೆ.
ಹುದ್ದೆಗಳ ಸಮೇತವಾಗಿ ಈ ಎಲ್ಲಾ ಕಚೇರಿಗಳ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಪ್ರಭಾವದಿಂದಲೇ ಈ ಆದೇಶ ಹೊರ ಬಿದ್ದಿದೆ ಎನ್ನಲಾಗಿದ್ದು, ಇದು ಉತ್ತರ ಕರ್ನಾಟಕದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
SCROLL FOR NEXT