ರಾಜ್ಯ

ಕೇರಳದಲ್ಲಿ ಪ್ರವಾಹ: ನೆರವಿಗೆ ಧಾವಿಸಿದ ಕರ್ನಾಟಕ

Lingaraj Badiger
ಬೆಂಗಳೂರು: ಕಳೆದ ಎರಡು ದಿನಗಳಿಂದ ಕೇರಳದ ವಿವಿಧೆಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದೇವರ ನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನೆರೆ ರಾಜ್ಯದ ನೆರವಿಗೆ ಧಾವಿಸಿದ ಕರ್ನಾಟಕ ಸರ್ಕಾರ, ವೈದ್ಯರ ತಂಡ ಹಾಗೂ 10 ಕೋಟಿ ರುಪಾಯಿ ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಲು ಮುಂದಾಗಿದೆ.
ಪ್ರವಾಹದಿಂದಾಗಿ ಕೇರಳದಲ್ಲಿ ಇದುವರೆಗೆ 27 ಮಂದಿ ಮೃತಪಟ್ಟಿರುವುದಕ್ಕೆ ವಿಷಾಧ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ಕೇರಳಕ್ಕೆ ವೈದ್ಯರ ತಂಡ ಹಾಗೂ 10 ಕೋಟಿ ರುಪಾಯಿ ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ರವಾನೆ ಮಾಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಅವರಿಗೆ ಸೂಚಿಸಿದ್ದಾರೆ.
ಪ್ರವಾಹ ಪರಿಸ್ಥಿತಿ ಎದುರಿಸಲು ಅಗತ್ಯ ನೆರವು ನೀಡುವ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರಿಗೆ ಕರೆ ಮಾಡಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಈಗಾಗಲೇ ಕಬಿನಿಯ ಹಿನ್ನೀರಿನಿಂದ ಪ್ರವಾಹ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಎಂಬ ಕೇರಳ ಸರ್ಕಾರದ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ, ಕಬಿನಿ ಜಲಾಶಯದಿಂದ 75 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.
SCROLL FOR NEXT