ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜನರಲ್ಲಿ ವೈಜ್ಞಾನಿಕ ಆಸಕ್ತಿಯನ್ನು ಉತ್ತೇಜಿಸಲು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರಗಳನ್ನು ನಡೆಸಲು ಟಿವಿ ಚಾನಲ್ ಒಂದನ್ನು ಪ್ರಾರಂಭಿಸಲು ಯೋಜಿಸಿದೆ.
8 ರಿಂದ 10 ತರಗತಿಗಳ ವಿದ್ಯಾರ್ಥಿಗಳಿಗೆ ಸಾಮರ್ಥ್ಯವೃದ್ದಿ (ಕೆಪಾಸಿಟಿ ಬಿಲ್ಡಿಂಗ್ ಪ್ರೊಗ್ರಾಮ್) ಕಾರ್ಯಕ್ರಮಗಳನ್ನು ಇಸ್ರೋ ಆಯೋಜಿಸಲಿದೆ ಎಂದು ಇಸ್ರೋ ಅಧ್ಯಕ್ಷ .ಕೆ. ಶಿವನ್ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಾಹ್ಯಾಕಾಶ ಸಂಸ್ಥೆಯು ಆಯ್ದ ವಿದ್ಯಾರ್ಥಿಗಳಿಗೆ 25 ರಿಂದ 30 ದಿನಗಳವರೆಗೆ ತರಬೇತಿ ಶಿಬಿರಗಳನ್ನು ಆಯೋಜಿಸುತ್ತದೆ ಎಂದು ಅವರು ಹೇಳಿದರು, ಈ ಅವಧಿಯಲ್ಲಿ ವಿದ್ಯಾರ್ಥಿಗಳು ಪ್ರಯೋಗಾಲಯಕ್ಕೆ ಭೇಟಿ ನೀಡಲು, ತಾವೇ ಸಣ್ಣ ಸಣ್ಣ ಉಪಗ್ರಹಗಳ ನಿರ್ಮಿಸಲು ಅವಕಾಶ ನೀಡಲಾಗುತ್ತದೆ ಎಂದರು.
ದೇಶಾದ್ಯಂತ ಯುವಜನತೆಯಲ್ಲಿ ವೈಜ್ಞಾನಿಕ ಜಾಗೃತಿ ಮೂಡಿಸುವ ನಿತ್ಟಿನಲ್ಲಿ ನಾವು ಟಿವಿ ಚಾನಲ್ ಒಂದರ ಪ್ರಾರಂಭಕ್ಕೆ ಯೋಜಿಸಿದ್ದೇವೆ, ಸಧ್ಯ ಭಾರತದಲ್ಲಿ ವಿಜ್ಞಾನ ಟಿವಿ ಚಾನೆಲ್ ಇಲ್ಲ, ಈ ಚಾನಲ್ ಜನರಲ್ಲಿ ವೈಜ್ಞಾನಿಕ ಕಳಕಳಿ, ವಿಜ್ಞಾನದ ಕುರಿತಾದ ಆಸಕ್ತಿ ಹುಟ್ಟಿಸಲಿದೆ ಎಂದು ಶಿವನ್ ಹೇಳಿದ್ದಾರೆ.
ಅಲ್ಲದೆ, ಬಾಹ್ಯಾಕಾಶ ತಂತ್ರಜ್ಞಾನದ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಂಡಿಸಲು ವಿಶೇಷ ಕೇಂದ್ರವೊಂದರ ಸ್ಥಾಪನೆಗೆ ಇಸ್ರೋ ಯೋಜಿಸಿದೆ ಎಂದೂ ಅವರು ಹೇಳಿದ್ದಾರೆ."ನಾವು ವಿಶೇಷ ವಿಚಾರ ವಿನಿಮಯ ಕೇಂದ್ರವನ್ನು ಹೊಂದಲು ಬಯಸುತ್ತೇವೆ. ಅತ್ಯುತ್ತಮ ಆಲೋಚನೆ, ಸಂಶೋಧನೆ ಮತ್ತು ಅಭಿವೃದ್ಧಿಗಳನ್ನು ಒಳಗೊಳ್ಳಬೇಕು ಎನ್ನುವುದು ನಮ್ಮ ಗುರಿ. ಎಂದು ಶಿವನ್ ವಿವರಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos