ದಂಪತಿ ಒಂದು ಗೂಡಿಸಿದ ಸಿಜೆಐ ದೀಪಕ್ ಮಿಶ್ರಾ
ಹುಬ್ಬಳ್ಳಿ: ನೂತನ ನ್ಯಾಯಾಲಯಗಳ ಸಂಕೀರ್ಣಗಳ ಉದ್ಘಾಟನೆಗಾಗಿ ಆಗಮಿಸಿದ್ದ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಎಂದಿಗೂ ಮರೆಯಲಾಗದಂತದ ಘಟನೆಗೆ ಸಾಕ್ಷಿಯಾದರು.
ವಿಶೇಷ ಲೋಕ ಅದಾಲತ್ ನಲ್ಲಿ ಕೌಟುಂಬಿಕ ವಾಜ್ಯ ಒಂದನ್ನು ಖುದ್ದಾಗಿ ಇತ್ಯರ್ಥ ಪಡಿಸಿದರು. ಹುಬ್ಬಳ್ಳಿ ಕೌಟುಂಬಿಕ ನ್ಯಾಯಾಲಯದ ಮುಂದೆ ಇದ್ದ ಗಂಡ-ಹೆಂಡಿರ ನಡುವಿನ ವಿಚ್ಛೇದನ ಪ್ರಕರಣ ಬಗೆಹರಿಸಿ ದಂಪತಿ ಹಾಗೂ ಮಕ್ಕಳನ್ನು ಒಗ್ಗೂಡಿಸಿದರು.
ಇಲ್ಲಿನ ಕೇಶ್ವಾಪುರದ ನಿವಾಸಿ ಜಗದೀಶ್ ಶೆಳಗಿ ಹಾಗೂ ಪಾರ್ವತಿ 2000 ದಲ್ಲಿ ಮದುವೆಯಾಗಿದ್ದರು. 2015 ರಲ್ಲಿ ವಿಚ್ಛೇದನ ಪ್ರಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ವಿಶೇಷ ಲೋಕ ಅದಾಲತ್ ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮುಂದೆ ವಿಚಾರಣೆಗೆ ಬಂದಿತು.
ನ್ಯಾಯಿಕ ಸಂಧಾನಕಾರರಾದ ಮಹೇಶ್ ಪಾಟೀಲ್ ಹಾಗೂ ವಕೀಲ ಸಂಧಾನಕಾರರಾದ ಶೋಭಾ ಪವಾರ್ ಅವರು ಪ್ರಕರಣ ನಿರ್ವಹಿಸುತ್ತಿದ್ದರು. ವಿಚ್ಛೇದನ ಕೋರಿದ ದಂಪತಿ ಹಾಗೂ ಮಕ್ಕಳಾದ ರೋಹಿತ್, ನಂದಿನಿ, ರಕ್ಷಿತಾ ಹಾಗೂ ಸಿದ್ಧಾರ್ಥರೊಂದಿಗೆ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಹಾಜರು ಪಡಿಸಿದರು.
ನ್ಯಾ. ದೀಪಕ್ ಮಿಶ್ರಾ ಅವರು ಗಂಡ-ಹೆಂಡತಿಗೆ ಕೌಂಟುಬಿಕ ಮೌಲ್ಯಗಳನ್ನು ತಿಳಿಸುವುದರ ಮೂಲಕ ವಾದಿ-ಪ್ರತಿವಾದಿಗಳ ಮನ ಒಲಿಸಿದರು. "ಈಗ ನೀವಿಬ್ಬರೂ ಹಟ ಬಿದ್ದು ವಿಚ್ಛೇದನ ಪಡೆದರೆ, ನಾಳೆ ನಿಮ್ಮ ಮಕ್ಕಳಿಗೆ ಯಾವ ರೀತಿಯಾಗಿ ಮದುವೆ ಹಾಗೂ ಕೌಟುಂಬಿಕ ಜೀವನವನ್ನು ಕಟ್ಟಿಕೊಳ್ಳಲು ಹೇಳುತ್ತೀರಿ? ನಿಮ್ಮ ನಡುವಿನ ಜಗಳಗಳನ್ನು ನೋಡಿ ಬೆಳೆದ ಮಕ್ಕಳು ಭವಿಷ್ಯದಲ್ಲಿ ಕುಂಟುಬ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡು ಮದುವೆಯಾಗಲು ಹಿಂದೇಟು ಹಾಕುತ್ತಾರೆ. ಕುಟುಂಬ ವ್ಯವಸ್ಥೆ ಹಾಳಾದರೆ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದು ಜೀವಿಸಿ ಸುಖಸಂತಸದಿಂದರಿ ಎಂದು ಸಲಹೆ ನೀಡಿದರು.
ನ್ಯಾಯಮೂರ್ತಿಗಳ ಮಾತು ಕೇಳಿದ ದಂಪತಿ ತಮ್ಮ ವಿಚ್ಛೇದನ ಪ್ರಕರಣವನ್ನು ಹಿಂಪಡೆದು ಪ್ರಕರಣ ಸುಖಾಂತ್ಯಗೊಳಿಸಿಕೊಂಡರು. ಪರಸ್ಪರ ಒಟ್ಟಿಗೆ ಬಾಳುವುದಾಗಿ ಹೇಳಿದ ದಂಪತಿ ಮಕ್ಕಳೊಂದಿಗೆ ಸಿಹಿ ಹಂಚಿಕೊಂಡರು.
ದೀಪಕ್ ಮಿಶ್ರಾ ಕುಟುಂಬ ನ್ಯಾಯಾಲಗಳ ವ್ಯಾಜ್ಯ ಬಗೆಹರಿಸುವ ಉತ್ತಮ ವ್ಯಕ್ತಿ ಎಂದು ಹುಬ್ಬಳ್ಳಿಯ ಹಿರಿಯ. ವಕೀಲ ಮೋಹನ್ ಲಿಂಬಿಕಾಯಿ ಹೇಳಿದ್ದಾರೆ. ಕಳೆದ 2 ವರ್ಷಗಳಿಂದ ದಂಪತಿಯ ವಿಚ್ಚೇಧನ ಪ್ರಕರಣ ಲೋಕ ಅದಾಲತ್ ನಲ್ಲಿತ್ತು, ಮುಖ್ಯ ನ್ಯಾಯಮೂರ್ತಿಗಳು ದಂಪತಿಯನ್ನು ಒಂದುಗೂಡಿಸಿದ್ದಾರೆ, ಮುಖ್ಯನ್ಯಾಯಮೂರ್ತಿಗಳು ವಿಶೇಷ ಆಸಕ್ತಿ ತೋರಿಸಿ ಪ್ರಕರಣಗಳನ್ನು ಶೀಘ್ರವೇ ಬಗೆಹರಿಸುತ್ತಾರೆ ಎಂದು ಹೇಳಿದ್ದಾರೆ. ಭಾನುವಾರ ಮಿಶ್ರಾ 5 ಕೇಸುಗಳನ್ನು ಇತ್ಯರ್ಥಗೊಳಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos