ರಾಜ್ಯ

ಪ್ರವಾಹ ಭೀತಿ: ರಾಜ್ಯದ ಖ್ಯಾತ ರಂಗನತಿಟ್ಟು ಪಕ್ಷಿಧಾಮ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Srinivasamurthy VN
ಮಂಡ್ಯ: ಕಾವೇರಿ ಕಣಿವೆಯಲ್ಲಿ ಭಾರಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ರಾಜ್ಯದ ಖ್ಯಾತ ಪ್ರವಾಸಿ ತಾಣ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿದರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಕೊಡಗು, ಮಡಿಕೇರಿ ಮತ್ತು ಭಾಗಮಂಡಲಗಳಲ್ಲಿ ಕಳೆದೊಂದು ವಾರದಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ಕೆಆರ್​ಎಸ್​ ಜಲಾಶಯಕ್ಕೆ ವಿಪರೀತ ನೀರು ಹರಿದುಬರುತ್ತಿದೆ. ಜಲಾಶಯದಿಂದ ನಿತ್ಯ ಸುಮಾರು 1.25 ಕ್ಯೂಸೆಕ್ಸ್ ಅಡಿ​ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸಿದ್ಧ ಪಕ್ಷಿಧಾಮ ರಂಗನತಿಟ್ಟು ಜಲಾವೃತಗೊಂಡಿದೆ.
ಭಾರಿ ಪ್ರಮಾಣದ ನೀರನ್ನು ಡ್ಯಾಂನಿಂದ ನದಿಗೆ ಬಿಡುಗಡೆ ಮಾಡುತ್ತಿರುವುದರಿಂದ ರಂಗನತಿಟ್ಟು ಜಲಾವೃತಗೊಂಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಪಕ್ಷಿಧಾಮಕ್ಕೆ ಪ್ರವಾಸಿಗರ ಮತ್ತು ಪಕ್ಷಿ ವೀಕ್ಷಕರ ಭೇಟಿ ನಿಷೇಧಿಸಲಾಗಿದೆ. ಈ ಸಂಬಂಧ ಮೂರು ದಿನಗಳ ಹಿಂದೆಯೇ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಈ ನಡುವೆ ಕಾವೇರಿಯ ಪ್ರವಾಹದಿಂದಾಗಿ ಶ್ರೀರಂಗಪಟ್ಟಣದ ವೆಲ್ಲಸ್ಲಿ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದ್ದು ಸೇತುವೆ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ. ಸೇತುವೆಯ ಮುಂಭಾಗದಲ್ಲಿ ಗೋಡೆ ನಿರ್ಮಾಣ ಮಾಡಿರುವ ಸಂಚಾರ ಪೊಲೀಸರು ವಾಹನಗಳ ಸಂಚಾರವನ್ನು ತಡೆದಿದ್ದಾರೆ. ಅತ್ತ, ಚಾಮರಾಜನಗರದ ವೆಸ್ಲಿ ಸೇತುವೆಯೂ ಮುಳುಗಡೆಯಾಗಿದೆ. 
SCROLL FOR NEXT