ಕೊಡಗು, ಕೇರಳ ಪ್ರವಾಹಕ್ಕೆ ಮನುಷ್ಯನೇ ಕಾರಣ: ಹೈಕೋರ್ಟ್ ಸಿಜೆ
ಕೊಡಗು ಮತ್ತು ಕೇರಳದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಮನುಷ್ಯನ ತಪ್ಪುಗಳೇ ಕಾರಣ. ಇನ್ನಾದರೂ ನಾವು...
ಬೆಂಗಳೂರು: ಕೊಡಗು ಮತ್ತು ಕೇರಳದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಮನುಷ್ಯನ ತಪ್ಪುಗಳೇ ಕಾರಣ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು ಎಂದು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು ಸೋಮವಾರ ಹೇಳಿದ್ದಾರೆ.
ಇಂದು ಕಾರ್ಕಳ ತಾಲೂಕಿನ ಕಣಜಾರು ಗ್ರಾಮದ ಕ್ವಾರಿಯಿಂದ ಸಮೀಪದ ಹಳ್ಳದ ನೀರು ಕಲುಷಿತಗೊಳ್ಳುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿ ವಿಚಾರಣೆ ವೇಳೆ ಕೇರಳ ಮತ್ತು ಕೊಡಗಿನ ಪ್ರವಾಹ ಪರಿಸ್ಥಿತಿಯನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿಗಳು, ಇಲ್ಲಿ ಪ್ರವಾಹ ಏಕಾಏಕಿ ಬಂದಿದ್ದಲ್ಲ, ಪ್ರವಾಹ ಪರಿಸ್ಥಿತಿಯನ್ನು ನಾವೇ ಸೃಷ್ಟಿಸಿಕೊಂಡಿದ್ದು ಎಂದರು.
ಈಗ ಪ್ರಕೃತಿಗೇ ಆಪತ್ತು ಬಂದೊದಗಿದೆ. ಇದು ಒಂದೆರಡು ದಿನಗಳಲ್ಲಿ ನಡೆದದ್ದಲ್ಲ. ಇದರ ಹಿಂದೆ ಅನೇಕ ಮಾನವ ನಿರ್ಮಿತ ತಪ್ಪುಗಳಿವೆ ಎಂದು ದಿನೇಶ್ ಮಹೇಶ್ವರಿ ಅವರು ಹೇಳಿದ್ದಾರೆ.
ಭೂಕಂಪವಾದರೆ ಏಕಾಏಕಿ ಆಗಿದೆ ಎಂದು ಹೇಳಬಹುದು. ಆದರೆ ಈ ರೀತಿ ಪ್ರವಾಹ ಪರಿಸ್ಥಿತಿ, ಬೆಟ್ಟ ಕುಸಿತದಂತಹ ಘಟನೆಗಳಿಗೆ ನಾವೇ ಕಾರಣ ಎಂಬುದನ್ನು ಪ್ರಕೃತಿ ಒತ್ತಿ ಹೇಳುತ್ತಿದೆ ಎಂದರು.