ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಭೇಟಿ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ಕಂಡು ಕೇಳರಿಯದ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆ ಕುರಿತು ಇಡೀ ಕರ್ನಾಟಕವೇ ಮಿಡಿದಿದ್ದು, ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳು, ನಿಧಿಗಳನ್ನು ಕಳುಹಿಸುತ್ತಿದ್ದಾರೆ. ಈ ನಡುವೆ ಜನರೊಂದಿಗೆ ಕೈಜೋಡಿಸಿರುವ ರಾಜಕೀಯ ಪಕ್ಷಗಳೂ ಕೂಡ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿದ್ದಾರೆ.
ಪಕ್ಷ, ರಾಜಕೀಯ ಎಂಬ ಗಡಿ ದಾಟಿರುವ ನಾಯಕರು ಪ್ರವಾಹಪೀಡಿತ ಸಂತ್ರಸ್ತರಿಗೆ ಸಹಾಯಹಸ್ತ ಚಾಚಲು ಮುಂದಾಗಿದ್ದಾರೆ.
ಪ್ರಮುಖವಾಗಿ ಬಿಜೆಪಿ, ಬೆಂಗಳೂರು ನಗರದ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಪಾಲಿಕೆ ಸದಸ್ಯ 2 ತಿಂಗಳ ವೇತನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ.
ಇನ್ನು ಕಾಂಗ್ರೆಸ್ ಈಗಾಗಲೇ ವಿಶೇಷ ನೆರವಿನ ಸಮತಿಯನ್ನು ರಚನೆ ಮಾಡಿದ್ದು, ಈ ಮೂಲಕ ಸಂತ್ರಸ್ತರಿಗೆ ನೆರವು ನೀಡಲು ನಿರ್ಧರಿಸಿದ್ದಾರೆ. ಸಂತ್ರಸ್ತ ಜನರಿಗೆ ನಿಧಿ, ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಅವುಗಳನ್ನು ಸಂಕಷ್ಟದಲ್ಲಿರುವ ಜನರಿಗೆ ತಲುಪಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಇನ್ನು ಜೆಡಿಎಸ್ ಶಾಸಕರು ಕೂಡ ತಮ್ಮ 1 ತಿಂಗಳವೇತನವನ್ನು ಸಂತ್ರಸ್ತ ಜನರಿಗೆ ನೀಡಲು ನಿರ್ಧರಿಸಿದ್ದಾರೆ.
ಅಗತ್ಯವಿರುವ ವಸ್ತುಗಳ ಕುರಿತು ಎಲ್ಲಾ ಜಿಲ್ಲಾ ಘಟಕಗಳಿಗೂ ಪಟ್ಟಿಗಳನ್ನು ತಲುಪಿಸಲಾಗಿದೆ. ನಿರಾಶ್ರಿತ ಕೇಂದ್ರಗಳಿಗೆ ತರಕಾರಿ, ಅಗತ್ಯ ವಸ್ತುಗಳನ್ನು ತಲುಪಿಸಲಾಗುತ್ತಿದೆ. ಸೇವಾ ಭಾರತಿ ಮೂಲಕ ಸಂಗ್ರಹಿಸಲಾಗಿದ್ದ ಹಣವನ್ನು ತಲುಪಿಸಲಾಗುತ್ತಿದೆ. ನೆರವಿನ ವಸ್ತುಗಳನ್ನು ನಿರಾಶ್ರಿತ ಕೇಂದ್ರಗಳಿಗೆ ತಲುಪಿಸುತ್ತಿದ್ದೇವೆಂದು ಬಿಜೆಪಿ ಶಾಸಕ ಸಿಟಿ. ರವಿ ಹೇಳಿದ್ದಾರೆ.
ಬಿಜೆಪಿಯ 12 ವೈದ್ಯಕೀಯ ತಂಡ ಈಗಾಗಲೇ ಕೊಡಗು ತಲುಪಿದ್ದು, ವೈದ್ಯಕೀಯ ಸೇವೆಗಳನ್ನು ಮಾಡುತ್ತಿದೆ.
ಎಂಎಲ್ಎ, ಎಂಎಲ್'ಸಿ ಮತ್ತು ಎಂಪಿಗಳ ತಿಂಗಳ ವೇತನವಷ್ಟೇ ಅಲ್ಲದೆ, ನೆರವು ಕಾರ್ಯಕ್ಕಾಗಿ ರಾಜ್ಯಸಭಾ ಸಂಸದ ಕೆ.ಸಿ.ರಾಮಮೂರ್ತಿ ನೇತೃತ್ವದಲ್ಲಿ ಕಾಂಗ್ರೆಸ್ ವಿಶೇಷ ತಂಡವನ್ನು ರಚನೆ ಮಾಡಿದೆ. ಈ ತಂಡದ ಮೂಲಕ ನೆರವಿನ ಕಾರ್ಯವನ್ನು ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
ಕಾರ್ಯಕರ್ತರು ನೆರವಿನ ವಸ್ತುಗಳನ್ನು ಸಂಗ್ರಹಿಸಿದ್ದು, ಸೋಮವಾರ ನಡೆಯಲಿರುವ ಸಮಿತಿಯ ಸಭೆ ಬಳಿಕ ಬೆಂಗಳೂರಿನಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಟ್ರಕ್ ಮೂಲಕ ತೆರಳಿ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಬಿಜೆಪಿ ಹಿರಿಯ ಮುಖಂಡ ಆರ್.ಅಶೋಕ್ ಅವರು. ಶಾಸಕರು ಹಾಗೂ ಜನ ಪ್ರತಿನಿಧಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೂ.11.05 ಲಕ್ಷ ಸಂಗ್ರಹವಾಗಿದೆ. ಮುಂದಿನ 3-4 ದಿನಗಳಲ್ಲಿ ಎಲ್ಲಾ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದ್ದರು.