ಮಡಿಕೇರಿ: ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ ಕೊಡಗು ಜಿಲ್ಲೆಯಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ.
ಈ ಮಧ್ಯೆ ಹೆಬೆಟ್ಟಗಿರಿಯಲ್ಲಿ ಗುಡ್ಡ ಕುಸಿತದಿಂದ ಅವಶೇಷಗಳಡಿ ಸಿಕ್ಕಿದ್ದ ಮಿನ್ನಾಂದ ಉಮಾವ್ವ ಎಂಬವರ ಮೃತದೇಹವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳು ಇಂದು ಪತ್ತೆ ಹಚ್ಚಿದ್ದಾರೆ.
ಮಗ ಗಣಪತಿ ಕಣ್ಣೆದುರೇ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ತಾಯಿಯ ಮೃತದೇಹವನ್ನು ಸ್ಥಳೀಯರ ನೆರವಿನಿಂದ ರಕ್ಷಣಾ ಸಿಬ್ಬಂದಿ ಇಂದು ಪತ್ತೆ ಹಚ್ಚಿದ್ದಾರೆ. ಇದರಿಂದಾಗಿ ಕೊಡಗಿನಲ್ಲಿ ವಿಪತ್ತಿನಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆ ಆಗಿದೆ.
ಈ ಮಧ್ಯೆ ಮಾದಾಪುರದಲ್ಲಿ ಗುಡ್ಡ ಕುಸಿತದ ಅವಶೇಷಗಳಡಿಯಲ್ಲಿ ಸಿಲುಕಿದ ಸಾಬು ಉತ್ತಪ್ಪ ಮೃತದೇಹ ಪತ್ತೆಗಾಗಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಜೋಡುಪಾಳ್ಯ , ಮುಕೊಡ್ಲು ಬಳಿಯಲ್ಲಿ ವಿಶೇಷ ತಂಡಗಳಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಈ ಮಧ್ಯೆ ನಮ್ಮಗೆ ಯಾವುದೇ ರೀತಿಯ ಶೆಡ್ ಬೇಡ.ಸಂತ್ರಸ್ತರಿಗೆ ಭೂಮಿ ಕೊಡಿ ಎಂದು ಕಾಳೂರು ಗ್ರಾಮದ ಅಲಪಾಂಡ ಪೊನ್ನಪ್ಪ ಕಣ್ಣೀರು ಹಾಕಿದರು. ಪರಿಹಾರ ಕೇಂದ್ರಗಳಲ್ಲಿ ಪಡಿತರ ದುರ್ಬಳಕೆ ಕುರಿತಂತೆ ಮಾತನಾಡಿದ ಅವರು, ಪಡಿತರ ಅಂಗಡಿಗಳಲ್ಲಿಯೇ ಸರ್ಕಾರ ವಿತರಿಸುವಂತೆ ಸಲಹೆ ನೀಡಿದರು.