ಮೈಸೂರು: ಕೊಡಗು ಜಿಲ್ಲೆಯ ಪ್ರವಾಹದ ಸಂತ್ರಸ್ತರನ್ನು ಮತ್ತು ಅಲ್ಲಿನ ಸ್ಥಿತಿಗತಿಯನ್ನು ಅರಿಯಲು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ನಿನ್ನೆ ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಜಿಲ್ಲಾ ಉಸ್ತುವಾರಿ ಸಚಿವ ಸಾ ರಾ ಮಹೇಶ್ ವಿರುದ್ಧ ಮಾಧ್ಯಮಗಳ ಮುಂದೆ ಸಿಟ್ಟುಗೊಂಡಿದ್ದು ಇದೀಗ ವ್ಯಾಪಕ ಸುದ್ದಿಯಾಗುತ್ತಿದೆ.
ಈ ಬಗ್ಗೆ ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಘಟನೆಯ ಸತ್ಯಾಸತ್ಯತೆಯನ್ನು ತಿಳಿದುಕೊಂಡು ಮಾತನಾಡಬೇಕು ಎಂದು ಹೇಳಿದ್ದಾರೆ, ಈ ಬಗ್ಗೆ ಫೇಸ್ ಬುಕ್ ಲೈವ್ ನಲ್ಲಿ ಸ್ಪಷ್ಟನೆ ನೀಡಿರುವ ಅವರು, ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗಿಗೆ ಪರಿಹಾರ ಪ್ಯಾಕೇಜ್ ನ್ನು ಘೋಷಿಸಲು ಬಂದಿರಲಿಲ್ಲ. ಅವರು ಬಂದಿರುವುದು ಈ ಅವಘಡ ಸಂದರ್ಭದಲ್ಲಿ ಭಾರತೀಯ ಸೇನೆ, ನೌಕಾಪಡೆ, ರಕ್ಷಣಾ ಪಡೆ ಹೇಗೆ ಸ್ಪಂದಿಸಿತು, ಮುಂದಿನ ದಿನಗಳಲ್ಲಿ ಯಾವ ರೀತಿ ಕೆಲಸ ಮಾಡಲಿದೆ ಮತ್ತು ಪ್ರವಾಹದಿಂದ ಉಂಟಾಗಿರುವ ವಸ್ತುಸ್ಥಿತಿಯನ್ನು ಅರಿತುಕೊಳ್ಳಲು ಬಂದಿದ್ದರು ಎಂದರು.
ಇತ್ತೀಚೆಗೆ ಕೆಲವರಿಗೆ ಫೇಸ್ ಬುಕ್ ಸಾಮಾಜಿಕ ಮಾಧ್ಯಮ ಮನೆಯಲ್ಲಿನ ಟಾಯ್ಲೆಟ್ ರೀತಿ ಆಗಿದೆ. ಮನಸ್ಸಿನೊಳಗಿರುವ ಕಸ, ಕೊಚ್ಚೆಯನ್ನು ತೊಳೆದುಕೊಳ್ಳಲು ಶೌಚದಂತಾಗಿದೆ, ರಕ್ಷಣಾ ಸಚಿವೆ ಉಸ್ತುವಾರಿ ಸಚಿವರ ಮೇಲೆ ಸಿಟ್ಟುಗೊಂಡಿರುವುದರ ಬಗ್ಗೆಯೇ ಇಡೀ ದಿನ ಚರ್ಚೆಯಾಗುತ್ತಿರುವುದು ಬೇಸರ ಉಂಟುಮಾಡುತ್ತಿದೆ ಎಂದರು.
ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಾವು ಬೆಳಗ್ಗೆ 7 ಗಂಟೆಯಿಂದಲೇ ಕೊಡಗಿನ ಅಲ್ಲಲ್ಲಿ ಭೇಟಿ ಆರಂಭಿಸಿದೆವು. ಕುಶಾಲನಗರ, ಮಾದಾಪುರ, ಹಟ್ಟಿಹೊಳೆ ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿ ನಾಶವಾದ ಮನೆಗಳು, ರಸ್ತೆಗಳು ಮೊದಲಾದವನ್ನು ಕಂಡು ಜಿಲ್ಲಾಧಿಕಾರಿಗಳು, ಇತರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದರು. ವಾಸ್ತವವನ್ನು ತಿಳಿದುಕೊಂಡರು. ಇಲ್ಲಿನ ಕಾಫಿ ಮತ್ತು ಕಾಳು ಮೆಣಸು ನಾಶ, ಸಾಂಬಾರು ಪದಾರ್ಥಗಳು ನಾಶಗೊಂಡಿರುವುದರ ಬಗ್ಗೆ ಕೂಡ ಆಳವಾದ ಜ್ಞಾನ ಪಡೆದುಕೊಂಡು ಮಾತನಾಡಿದ್ದಾರೆ.
ನಂತರ ಅಲ್ಲಿಂದ ಸಣ್ಣ ಬದಲಾವಣೆ ಮಾಡಿ ಮಡಿಕೇರಿಯಲ್ಲಿ ಎರಡು ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದೆವು. ಅಲ್ಲಿ ಮಕ್ಕಳನ್ನು ಮಾತನಾಡಿಸಿದ್ದಾರೆ. ಅಲ್ಲಿಂದ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಗೆ ಮುನ್ನ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರ ಜೊತೆ ನಿರ್ಮಲಾ ಸೀತಾರಾಮನ್ ಮಾತುಕತೆ ನಡೆಸಿದ್ದು ಸ್ವಲ್ಪ ದೀರ್ಘಾವಧಿ ಹಿಡಿಯಿತು. ಅವರ ಕೆಲವು ಮನವಿಗಳನ್ನು, ಸಲಹೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಸಚಿವ ಸಾ ರಾ ಮಹೇಶ್ ಅವರು ಬಂದು ಅನೇಕ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಯುವುದಿದೆ ಆ ಸಭೆ ಮುಗಿಸಿಕೊಳ್ಳೋಣ, ಇಲ್ಲದಿದ್ದರೆ ತಡವಾಗುತ್ತದೆ ಎಂದರು.
ಆಗ ಸಚಿವೆ ನಿರ್ಮಲಾ ಸೀತಾರಾಮನ್ ಸ್ವಲ್ಪ ಸಿಡಿಮಿಡಿಗೊಂಡಿದ್ದು ನಿಜ, ಮಿಲಿಟರಿಯವರು ನನ್ನ ಪರಿವಾರದವರು, ನನ್ನ ಪರಿವಾರದವರು ಬಂದು ಮಾತನಾಡುತ್ತಿದ್ದಾರೆ ಎಂದರು, ಸಾರ್ವಜನಿಕ ಜೀವನದಲ್ಲಿ ಜನಪ್ರತಿನಿಧಿಗಳು ಜನರ ಮೇಲೆ ಮತ್ತು ಜನರು ಜನಪ್ರತಿನಿಧಿಗಳ ಮೇಲೆ ಸಿಟ್ಟಾಗುವುದು, ಆಕ್ರೋಶಗೊಳ್ಳುವುದು ಸಾಮಾನ್ಯ, ಆ ವಿಷಯವನ್ನು ದೊಡ್ಡದು ಮಾಡಿ ವಿಷಯವನ್ನು ರೂಪಾಂತರ ಮಾಡುವುದು ಸರಿಯಲ್ಲ, ಇಂದು ಕೊಡಗಿಗೆ ದೊಡ್ಡ ಪ್ರಮಾಣದಲ್ಲಿ ಪುನರ್ವಸತಿ ಮತ್ತು ಪರಿಹಾರ ಕಾರ್ಯವಾಗಬೇಕಿದೆ, ಅದರ ಬಗ್ಗೆ ಎಲ್ಲಾ ಪಕ್ಷದವರು ಒಟ್ಟಾಗಿ ಗಮನ ಹರಿಸೋಣ ಎಂದು ಸಂಸದ ಪ್ರತಾಪ್ ಸಿಂಹ ಕೇಳಿಕೊಂಡರು.