ರಾಜ್ಯ

ಪಿಒಪಿ ಘಟಕಕ್ಕೆ ದಾಳಿ: 853 ಗಣಪತಿ ವಿಗ್ರಹ ಜಪ್ತಿ

Manjula VN
ಬೆಂಗಳೂರು: ಪ್ಲಾಸ್ಟರ್ ಆಫ್ ಪ್ಯಾರಿಸ್'ನಿಂದ (ಪಿಒಪಿ) ಗಣೇಶ ವಿಗ್ರಹ ತಯಾರಿಕೆ ಮತ್ತು ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು ಶನಿವಾರ ನಗರದ 4 ಗಣೇಶ ವಿಗ್ರಹ ತಯಾರಿಕಾ ಮತ್ತು ಮಾರಾಟ ಘಟಕಗಳ ಮೇಲೆ ದಾಳಿ ನಡೆಸಿದ್ದು, 853 ಪಿಒಪಿ ಗಣೇಶ ವಿಗ್ರಹಗಳನ್ನು ವಶಪಡಿಸಿಕೊಂಡು ಘಟಕಗಳಿಗೆ ಬೀಗ ಜಡಿದಿದ್ದಾರೆ. 
ಕಳೆದ 2 ವರ್ಷಗಳಿಂದ ಪಿಒಪಿ ಗಣೇಶ ತಯಾರಿಕೆ ಮತ್ತು ಮಾರಾಟ ನಿಷೇಧಿಸಲಾಗಿದೆಯಾದರೂ ನಗರದಲ್ಲಿ ಪಿಒಪಿ ಗಣೇಶಗಳ ತಯಾರಿಕೆ ಮತ್ತು ಮಾರಾಟ ಎಗ್ಗಿಲ್ಲದೆ ನಡೆದೇ ಇದೆ. ಈ ಬಾರಿಯೂ ನಗರದ ಹಲವು ಗಣೇಶ ಮೂರ್ತಿ ತಯಾರಿಕಾ ಘಟಕಗಳು, ವ್ಯಾಪಾರಿಗಳು ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಪಿಒಪಿ ವಿಗ್ರಹ ತಯಾರಿಸಿ ಮಾರಾಟಕ್ಕೆ ಇಟ್ಟಿದ್ದಾರೆ. 
ಹೀಗಾಗಿ ಈ ಬಾರಿ ಪಿಒಪಿ ಗಣೇಶಗಳ ತಯಾರಿಕೆ, ಮಾರಾಟದ ಮೇಲೆ ಸಂಪೂರ್ಣ ನಿಯಂತ್ರಣ ಹೇರಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಿಬಿಎಂಪಿ ಮುಂದಾಗಿದೆ. 
ಈ ನಿಟ್ಟಿನಲ್ಲಿ ವಿಗ್ರಹ ತಯಾರಿಕಾ ಘಟಕಗಳ ಮೇಲೆ ದಾಳಿ ಆರಂಭಿಸಿದ್ದು, ಮೊದಲ ದಿನವೇ ನಗರದ ಆರ್.ವಿ. ರಸ್ತೆಯ ಪ್ರಮುಖ ನಾಲ್ಕು ವಿಗ್ರಹ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ 853 ಪಿಒಪಿ ಗಣೇಶ ವಿಗ್ರಹ ವಶಪಡಿಸಿಕೊಂಡು ಘಟಕಗಳಿಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ. 
SCROLL FOR NEXT