ಖಾಸಗಿ ಶಾಲೆಗಳು ಕನ್ನಡ ಬೋಧನೆ ಮಾಡುತ್ತಿಲ್ಲ: ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು: ರಾಜ್ಯದಲ್ಲಿರುವ ಖಾಸಗಿ ಶಾಲೆಗಳು ಕನ್ನಡ ಬೋಧನೆ ಕಡ್ಡಾಯ ಮಾಡಿರುವ ನಿಯಮವನ್ನು ಗಂಭೀರವಾಗಿ ಪರಿಗಣಿಸಿಲ್ಲ, ನಿಯಮವನ್ನು ಪಾಲನೆ ಮಾಡದ ಶಾಲೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಚ್ಚರಿಕೆ ನೀಡಿದೆ.
ಖಾಸಗಿ ಶಾಲೆಗಳ ವಿರುದ್ಧ ಸಾಕಷ್ಟು ದೂರುಗಳು ದಾಖಲಾಗಿದ್ದು, ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಧಿಕಾರ ಎಲ್ಲಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕರ ಬಳಿ ಆಯಾ ಶಾಲೆಗಳ ವಾಸ್ತವಿಕ ವರದಿಯನ್ನು ಕೇಳಿದೆ ಎಂದು ತಿಳಿದುಬಂದಿದೆ.
ಪ್ರೊ.ಜಿ.ಸಿದ್ದರಾಮಯ್ಯ ಮಾತನಾಡಿ, ಎಲ್ಲಾ ಜಿಲ್ಲೆಗಳ ವಾಸ್ತವಿಕ ವರದಿಗಳಿಗಾಗಿ ಕಾಯಲಾಗುತ್ತಿದೆ. ವರದಿ ಬಂದ ಕೂಡಲೇ ಶಾಲೆಗಳನ್ನು ಪಟ್ಟಿ ಮಾಡಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯನ್ನು ದ್ವಿತೀಯ ಭಾಷೆಯಾಗಿ ತೆಗೆದುಕೊಂಡು ಖಾಸಗಿ ಶಾಲೆಗಳೂ ಕೂಡ ಕನ್ನಡವನ್ನು ಬೋಧನೆ ಮಾಡಬೇಕೆಂದು ಸೂಚಿಸಲಾಗಿದೆ. ಸಿಬಿಎಸ್ಇ ಹಾಗೂ ಐಸಿಎಸ್ಇ ಮಂಡಳಿಗೂ ಈ ನಿಯಮಗಳು ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಇಲಾಕೆ ಹಂತದಲ್ಲಿ ಸೂಕ್ತ ರೀತಿಯ ವ್ಯವಸ್ಥೆಗಳಿಲ್ಲ. ಶಿಕ್ಷಣ ಇಲಾಖೆಯಲ್ಲಿರುವ ಹಿರಿಯ ಅಧಿಕಾರಿಗಳೂ ಕೂಡ ಪರಿಣಾಮಕಾರಿಯಾಗಿ ಕನ್ನಡ ಕಡ್ಡಾಯ ಮಾಡುವ ನಿಯಮಕ್ಕೆ ಬದ್ಧವಾಗಿಲ್ಲ. ಅಧಿಕಾರಿಗಳು ಇದೇ ರೀತಿ ವರ್ತನೆ ತೋರಿದ್ದೇ ಆದರೆ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಈ ನಡುವೆ ಖಾಸಗಿ ಶಾಲೆಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದು, ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಲ್ಲಿ ಸಮಸ್ಯೆಗಳು ಎದುರಾಗುತ್ತಿದೆ. ಶಿಕ್ಷಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ವೇಳೆ ಅರ್ಹತೆಯುಳ್ಳ ಶಿಕ್ಷಕರ ಅಗತ್ಯವಿದೆ. ಕನಿಷ್ಟ ಪಕ್ಷ ಶಿಕ್ಷಕರು ಡಿಪ್ಲೊಮಾ ಅಥವಾ ಬಿಎಡ್ ಆದರೂ ಮಾಡಿರಬೇಕು. ಇಂತಹ ಶಿಕ್ಷಕರು ಸಿಗುವುದು ಕಷ್ಟವಾಗಿದೆ ಎಂದು ಹೇಳಿಕೊಂಡಿವೆ.