ರಾಜ್ಯ

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಸ್ಐಟಿ ತಂಡ ಕಿರುಕುಳ ನೀಡುತ್ತಿದೆ- ಭರತ್ ಕುರಣೆ ಕುಟುಂಬ ಆರೋಪ

Manjula VN
ಬೆಳಗಾವಿ: ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ಜೊತೆಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿರುವ ಆರೋಪಿ ಭರತ್ ಕುರಣೆ ಕುಟುಂಬಸ್ಥರು ಎಸ್ಐಟಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಗುರುವಾರ ಆರೋಪ ಮಾಡಿದ್ದಾರೆ. 
ಭರತ್ ಕುರಣೆ ಪತ್ನಿ ಗಾಯತ್ರಿ ಎಸ್ಐಟಿ ವಿರುದ್ಧ ಆರೋಪವನ್ನು ಮಾಡಿದ್ದು, ಆಗಸ್ಟ್ ಮೊದಲ ವಾರದಲ್ಲಿ ಎಸ್ಐಟಿ ಅಧಿಕಾರಿಗಳು ನನ್ನ ಪತಿಯನ್ನು ಬಂಧನಕ್ಕೊಳಪಡಿಸಿದ್ದರು. ಬಳಿಕ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಪತಿಯನ್ನು ಬಂಧನಕ್ಕೊಳಪಡಿಸಿದ್ದಾಗಿನಿಂದಲೂ ಕುಟುಂಬ ಸದಸ್ಯರಿಗೆ ಕಿರುಕುಳ ನೀಡುತ್ತಲೇ ಇದ್ದಾರೆಂದು ಹೇಳಿದ್ದಾರೆ. 
ಎಸ್ಐಟಿ ಅಧಿಕಾರಿಗಳ ಕಿರುಕುಳದಿಂದಾಗಿ ನನ್ನ ಪತಿ ಇದೀಗ ಮಾನಸಿಕ ಹಾಗೂ ದೈಹಿಕವಾಗಿ ದುರ್ಬಲರಾಗುತ್ತಿದ್ದಾರೆಂದು ತಿಳಿಸಿದ್ದಾರೆ. 
ಕುರಣೆ ತಾಯಿ ರೇಖಾ ಮಾತನಾಡಿ, ಎಸ್ಐಟಿ ಅಧಿಕಾರಿಗಳು ಕೇವಲ ನನ್ನ ಮಗನಿಗಷ್ಟೇ ಅಲ್ಲ, ಇಡೀ ಕುಟುಂಬಕ್ಕೆ ಕಿರುಕುಳ ನೀಡುತ್ತಿದೆ. ವಿಚಾರಣೆ ನೆಪದಲ್ಲಿ ನನ್ನ ಹಿರಿಯ ಮಗ ಭರತ್ ನನ್ನೂ ಕೂಡ ಎಸ್ಐಟಿ ಅಧಿಕಾರಿಗಳು 5 ಬಾರಿ ವಶಕ್ಕೆ ಪಡೆದುಕೊಂಡಿದ್ದರು. ಎಸ್ಐಟಿ ಅಧಿಕಾರಿಗಳ ಕಿರುಕುಳವನ್ನು ಅನುಭವಿಸಲು ತಿಂಗಳಿನಲ್ಲಿ 5 ಬಾರಿ ನನ್ನ ಮಗ ಬೆಂಗಳೂರಿಗೆ ಹೋಗಿ ಬಂದಿದ್ದ ಎಂದು ಹೇಳಿದ್ದಾರೆ. 
ಭರತ್ ಕುರಣೆ ಪರ ವಕೀಲ ಚೇತನ್ ಮನ್ನೆರಿಕರ್ ಮಾತನಾಡಿ, ತನ್ನ ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಳ್ಳಲು ಭರತ್'ಗೆ ಕನಿಷ್ಟ 5 ನಿಮಿಷಗಳನ್ನೂ ಕೂಡ ಎಸ್ಐಟಿ ಅಧಿಕಾರಿಗಳು ನೀಡುತ್ತಿಲ್ಲ. ಇಂತಹ ವರ್ತನೆ ಕಾನೂನು ಚೌಕಟ್ಟಿನಲ್ಲಿಲ್ಲ. ಮುಗ್ಧ ಯುವಕರ ವಿರುದ್ಧ ಎಸ್ಐಟಿ ನಕಲಿ ಪ್ರಕರಣಗಳನ್ನು ದಾಖಲಿಸಬಾರದು ಎಂದು ಹೇಳಿದ್ದಾರೆ. 
ಗಾಯತ್ರಿ ಹಾಗೂ ರೇಖಾ ಅವರಿಗೆ ಇದೀಗ ಸನಾತನ ಸಂಸ್ಥೆ, ಹಿಂದೂ ಜನ ಜಾಗೃತಿ ಸಮಿತಿ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. 
SCROLL FOR NEXT