ರಾಜ್ಯ

ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು, ಚಿಕಿತ್ಸೆಗೆ ಚೆನ್ನೈನಿಂದ ತಜ್ಞ ವೈದ್ಯರ ತಂಡ

Nagaraja AB

ತುಮಕೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರು,  ಸಿದ್ಧಗಂಗಾ ಮಠದ  ಶತಾಯುಷಿ, ಡಾ. ಶಿವಕುಮಾರ ಶ್ರೀಗಳಿಗೆ ಚಿಕಿತ್ಸೆ ನೀಡಲು  ಚೆನ್ನೈಯಿಂದ ತಜ್ಞ ವೈದ್ಯರ ತಂಡ  ಆಗಮಿಸುತ್ತಿದೆ.

ಸಿದ್ದಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಪರಮೇಶ್ವರಪ್ಪ ಹಾಗೂ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯ ಡಾ. ರವೀಂದ್ರ ಅವರನ್ನೊಳಗೊಂಡ  ತಂಡ  ಚೆನ್ನೈಗೆ ತೆರಳಿದ್ದು, ಸಿದ್ದಗಂಗಾ ಶ್ರೀಗಳ ಚಿಕಿತ್ಸೆ ಸಂಬಂಧ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಅರವಳಿಕೆ ತಜ್ಞ ಡಾ. ಎಲ್. ಎನ್. ಕುಮಾರ್ ನೇತೃತ್ವದಲ್ಲಿನ ತಂಡ ಇಂದು ರಾತ್ರಿ  ವಿಮಾನದ ಮೂಲಕ ಚೆನ್ನೈಯಿಂದ ಬೆಂಗಳೂರಿಗೆ ಆಗಮಿಸಲಿದೆ. ನಂತರ ರಾತ್ರಿ 7-30ರ ಸುಮಾರಿಗೆ ಸಿದ್ದಗಂಗಾ ಮಠಕ್ಕೆ ತೆರಳಲಿದ್ದು, ಸ್ವಾಮೀಜಿಗಳ ತಪಾಸಣೆ ನಡೆಸಲಿದೆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂಬುದು ತಿಳಿದುಬಂದಿದೆ. ಈ ತಂಡದೊಂದಿಗೆ  ಪರಮೇಶ್ವರಪ್ಪ ನೇತೃತ್ವದಲ್ಲಿನ ತಂಡ ಕೂಡಾ ಸಿದ್ದಗಂಗಾ ಮಠಕ್ಕೆ ಆಗಮಿಸುತ್ತಿದೆ.

ಈ ಮಧ್ಯೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ದೂರವಾಣಿಯಲ್ಲಿ ಮಾತನಾಡಿರುವ ಡಾ. ಪರಮೇಶ್ವರಪ್ಪ,  ತಪಾಸಣೆ ಬಳಿಕ ಸ್ವಾಮೀಜಿಗಳನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡುವುದೇ ಅಥವಾ ಬೇಡವಾ ಎಂಬ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬಿಜಿಎಸ್ ಆಸ್ಪತ್ರೆಯಲ್ಲಿ  ಶ್ರೀಗಳಿಗೆ ಈಗಾಗಲೇ  11 ಸ್ಟೆಂಟ್‌ಗಳನ್ನು ಅಳವಡಿಸಲಾಗಿದೆ. ಆ ಸ್ಟಂಟ್ ಗಳನ್ನು ತೆಗೆಯುವುದು ಬಹಳಷ್ಟು ಕಷ್ಟ. ಅದಕ್ಕೆ ನುರಿತ ವೈದ್ಯರ ಸಲಹೆ ಪಡೆಯುತ್ತಿರುವುದಾಗಿ ಪರಮೇಶ್ವರಪ್ಪ ಹೇಳಿದ್ದಾರೆ.
ಕಳೆದ ರಾತ್ರಿ ಶ್ರೀಗಳ ಹೃದಯ ಬಡಿತದಲ್ಲಿ ಕೊಂಚ ಏರುಪೇರಾಗಿತ್ತು. ಅಲ್ಲದೇ ಶೀತ, ಜ್ವರ ಕಾಣಿಸಿಕೊಂಡಿತ್ತು. ನಂತರ ಅವರ ಆಪ್ತ ವೈದ್ಯರಾದ ಡಾ. ಪರಮೇಶ್ವರಪ್ಪ ಹಾಗೂ ಬಿಜಿಎಸ್ ಆಸ್ಪತ್ರೆಯ ವೈದ್ಯ ಡಾ. ರವೀಂದ್ರ  ನೇತೃತ್ವದಲ್ಲಿನ ತಂಡ ಶ್ರೀಕ್ಷೇತ್ರಕ್ಕೆ ಆಗಮಿಸಿ ತಡರಾತ್ರಿವರೆವಿಗೂ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದರು.
SCROLL FOR NEXT