ಮಂಗಳೂರು: ಬಂಟ್ವಾಳ ತಾಲೂಕು ಕೆದಿಲ ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ ಸಂಬಂಧ ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಶ್ರೀಗಳು ತನ್ನ ವಿರುದ್ಧ ವಿಚಾರಣೆಗೆ ತಡೆ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸ್ವಾಮೀಜಿ ವಿರುದ್ಧ ವಿಚಾರಣೆಗೆ ತಡೆ ನೀಡಿದು ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿದೆ.
ಹೈಕೋರ್ಟ್ ನ್ಯಾಯಾಧೀಶ ನಿಜಗಣ್ಣನವರ್ ಶ್ರೀಗಳ ವಿಚಾರಣೆಗೆ ತಡೆಯಾಜ್ಞೆ ನೀಡಿದ್ದಾರೆ.
2014ರ ಆಗಸ್ಟ್ 31ರಂದು ಕೆದಿಲ ಶ್ಯಾಮಪ್ರಸಾದ್ ಶಾಸ್ತ್ರಿ ತಮ್ಮ ಮನೆಯಲ್ಲಿ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಶಾಸ್ತ್ರಿಗಳ ಪತ್ನಿಯು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ರಾಘವೇಶ್ವರ ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸಿಐಡಿ ಪೋಲೀಸರು ವಿಚಾರಣೆ ನಡೆಸಿ ರಾಘವೇಶ್ವರ ಶ್ರೀ, ಕಲ್ಲಡ್ಕ ಪ್ರಭಾಕರ ಭತ್, ಶಿವಶಂಕರ ಭಟ್ ಅವರುಗಳ ವಿರುದ್ಧ ಪುತ್ತೂರು ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಶಿವಶಂಕರ ಭಟ್ ಅವರಿಗೆ ನ್ಯಾಯಾಲಯ ವಾರಂಟ್ ಜಾರಿ ಮಾಡಿದರೆ ಶ್ರೀಗಳಿಗೆ ಸಮನ್ಸ್ ಜಾರಿಗೊಳಿಸಿತ್ತು.