ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ
ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಕರೆದೊಯ್ದಿದ್ದು, ಅವರಿಗೆ ಇಂದು ಲಿವರ್ ಬೈಪಾಸ್ ಸರ್ಜರಿ ಮಾಡುವ ಸಾಧ್ಯತೆಯಿದೆ,ಗಾಲ್ ಬ್ಲಾಡರ್ ನಲ್ಲಿನ ಸೋಂಕು ತಡೆಗಟ್ಟುವಲ್ಲಿ ಸ್ಟೆಂಟ್ ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ಸರ್ಜರಿ ಮಾಡಲಾಗುತ್ತದೆ.
ಲಿವರ್ ಟ್ರಾನ್ಸ್ ಪ್ಲಾಂಟೇಷನ್ ತಜ್ಞ ಡಾ. ಮೊಹಮದ್ ರೆಲಾ ಅವರ ಜೊತೆ ಚರ್ಚಿಸಲಾಗಿದೆ ಎಂದು ಸಿದ್ದಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಪರಮೇಶ್ವರಪ್ಪ ಹೇಳಿದ್ದಾರೆ.
ನಿನ್ನೆ ಚೆನ್ನೈನ ರೆಲಾ ಆಸ್ಪತ್ರೆಗೆ ಏರ್ ಆ್ಯಂಬುಲೆನ್ಸ್ ನಲ್ಲಿ ಶ್ರೀಗಳನ್ನು ಶಿಫ್ಟ್ ಮಾಡಲಾಗಿತ್ತು, ನಿನ್ನೆಯಿಂದ ಶ್ರೀಗಳಿಗೆ ಹಲವು ಟೆಸ್ಟ್ ಗಳನ್ನು ಮಾಡಲಾಗಿದೆ ಎಂದು ಪರಮೇಶ್ವರಪ್ಪ ತಿಳಿಸಿದ್ದಾರೆ.
ಸ್ವಾಮಿಜಿಯವರ ದೇಹದಲ್ಲಿ 11 ಸ್ಟೆಂಟ್ ಅಳವಡಿಸಲಾಗಿದ್ದು, ಅವುಗಳ ಬ್ಲಾಕೇಜ್ ಕ್ಲಿಯರ್ ಮಾಡಲು ಶಸ್ತ್ರ ಚಿಕಿತ್ಸೆಗೊಳಗಾಗುವಂತೆ ಎರಡು ವರ್ಷಗಳ ಹಿಂದೆ ಮಠಕ್ಕೆ ಭೇಟಿ ನೀಡಿದ್ದ ಡಾ. ರೆಲಾ ಹೇಳಿದ್ದರು. ಅವರ ಸಲಹೆಯಂತೆ ಈಗಾಗಲೇ ಆರು ಬಾರಿ ಎಲ್ಲಾ ಸ್ಟೆಂಟ್ ಗಳ ಬ್ಲಾಕೇಜ್ ಕ್ಲಿಯರ್ ಮಾಡಲಾಗಿದೆ ಎಂದು ಬಿಜಿಎಸ್ ಆಸ್ಪತ್ರೆ ಮುಖ್ಯಸ್ಥ ಡಾ. ರವೀಂದ್ರ ಹೇಳಿದ್ದಾರೆ.
ಸ್ವಾಮೀಜಿ ಅವರಿಗೆ ಒಂದು ವೇಳೆ ಸರ್ಜರಿ ಮಾಡದಿದ್ದರೇ ಪಿತ್ತರಸ ಸಂಗ್ರಹಕ್ಕಾಗಿ ಹೆಚ್ಚುವರಿ ಚೀಲ ಅಳವಡಿಸಬೇಕಾಗುತ್ತದೆ, ಇದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ, ಆದರೆ ಸ್ವಾಮೀಜಿ ದೈನಂದಿನ ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗಲು ಇದರಿಂದ ತೊಂದರೆಯಾಗುತ್ತದೆ. ಹೀಗಾಗಿ ಶಸ್ತ್ರ ಚಿಕಿತ್ಸೆ ಅಗತ್ಯಯಿದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಮಠದ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ಮಾಡಿಸಲು ನಿರ್ಧರಿಸಿದೆ, ಹೀಗಾಗಿ ಡಾ. ರೆಲಾ ಸರ್ಜರಿಗೆ ಎಲ್ಲಾ ಸಿದ್ಧತೆ ಮಾಡುತ್ತಿದ್ದಾರೆ, 20 ವರ್ಷಗಳ ಹಿಂದೆ ಡಾ. ರೆಲಾ 5 ದಿನದ ಮಗುವಿಗೆ ಲಿವರ್ ಟ್ರಾನ್ಸ್ ಪ್ಲಾಂಟ್ ಮಾಡಿದ್ದರು. ಈಗ ಸ್ವಾಮೀಜಿ ಅವರಿಗೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.