ಬೆಂಗಳೂರು: ನಿನ್ನೆ ಮಗನೊಬ್ಬ ತಾಯಿಗೆ ಪೊರಕೆಯಿಂದ ಹೊಡೆದು ಕ್ರೌರ್ಯ ಮೆರೆದಿದ್ದ. ಇಲ್ಲೊಬ್ಬ ಮಗ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಶ್ವಥ್ ನಗರದ ಮನೆಯಲ್ಲಿ ಡಿಸೆಂಬರ್ 6ರ ರಾತ್ರಿ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉತ್ತಮ್ ಕುಮಾರ್ ಹೆತ್ತ ತಾಯಿ ಭಾರತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕುಡಿಯಲು ಹಣ ನೀಡದಕ್ಕೆ ಉತ್ತಮ್ ಕುಮಾರ್ ತಾಯಿಗೆ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದಾನೆ.
ತಾಯಿಗೆ ಬೆಂಕಿ ಹಚ್ಚಿ ಉತ್ತಮ್ ಕುಮಾರ್ ಪರಾರಿಯಾಗಿದ್ದಾನೆ. ಬೆಂಕಿಯಿಂದಾಗಿ ಭಾರತಿ ಅವರ ಎದೆ, ಹೊಟ್ಟೆ ಭಾಗದಲ್ಲಿ ಸುಟ್ಟ ಗಾಯಗಳಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಈ ಕುರಿತು ಇದೀಗ ಸದಾಶಿವನಗರ ಪೊಲೀಸರಿಗೆ ದೂರು ನೀಡಲಾಗಿದ್ದು ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ನಡೆಸಿದ್ದಾರೆ.