ಕುಂದಾಪುರ: ಮದುವೆಗೆ ಎಂಟು ದಿನಗಳಷ್ಟೇ ಬಾಕಿ ಇರುವಾಗ ವರನೊಬ್ಬ ರಸ್ತೆ ಅಪಘಾತದಲ್ಲಿ ಬಲಿಯಾಗಿರುವ ದುರಂತ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿಯ ಕುಂದಾಪುರ ತಾಲೂಕಿನ ಕೋಟೇಶ್ವರ ದೊಡ್ಡೋಣಿ ರಸ್ತೆಯ ಪೇಟೆಮನೆ ನಿವಾಸಿ ವರುಣ್ (30) ಎಂಬುವವರು ಅಪಘಾತದಿಂದ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಹಸೆಮಣೆ ಏರಬೇಕಾಗಿದ್ದ ವರುಣ್ ಮೃತಪಟ್ಟಿದ್ದಾರೆ.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ವರುಣ್ ಗೆ ಇದೇ ಡಿಸೆಂಬರ್ 30 ಕ್ಕೆ ಮದುವೆ ನಿಶ್ಚಯವಾಗಿತ್ತು.ಮದುವೆಯ ನಿಮಿತ್ತ ಊರಿಗೆ ಬಂದಿದ್ದ ವರುಣ್ ಬಾಳಲ್ಲಿ ವಿಧಿ ಬೇರೆಯೇ ಆಟವಾಡಿದೆ. ಶನಿವಾರ ಸಾಲಿಗ್ರಾಮದ ದೇವಸ್ಥಾನಕ್ಕೆ ಪೂಜೆಗಾಗಿ ತೆರಳುತ್ತಿದ್ದ ವರುಣ್ಚಿತ್ರಪಾಡಿ ಗ್ರಾಮದ ಬೆಲ್ಲದ ಗಣಪತಿ ದೇವಸ್ಥಾನ ಬಳಿ ಬಂದಾಗ ಅತಿಯಾದ ವೇಗದಿಂದ ಬಂದ ಲಾರಿಯೊಂದು ಬೈಕ್ ಗೆ ಹಿಂಭಾಗದಿಂದ ಡಿಕ್ಕಿ ಹೊಡೆದಿದೆ.ಈ ವೇಳೆ ಮುಂದೆ ಚಲಿಸುತ್ತಿದ್ದ ರೊಡ್ ರೋಲರ್ ಗೆ ಬೈಕ್ ಗುದ್ದಿದ್ದು ವರುಣ್ ರಸ್ತೆ ಮೇಲೆ ಬಿದ್ದಿದ್ದಾರೆ.ಕ್ಷಣಮಾತ್ರದಲ್ಲಿ ಲಾರಿ ವರುಣ್ ದೇಹದ ಮೇಲೆಯೇ ಹರಿದಿದ್ದು ಅವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದ ಸಂಬಂಧಿಗೆ ಹೃದಯಾಘಾತ
ವರುಣ್ ಸಾವಿನ ದುರಂತ ಸುದ್ದಿ ತಿಳಿದ ಆತನ ಸಂಬಂಧಿ ಕೋಟೇಶ್ವರ ದೊಡ್ಡೋಣಿಯ ಗಿರಿಜಾ(68) ಎಂಬಾಕೆಯು ಹೃದಯಾಘಾತದಿಂದ ಅಸುನೀಗಿದ್ದಾರೆ.ವರುಣ್, ಮೃತ ಗಿರಿಜಾ ಹಾಗೂ ವರುಣ್ ತಂದೆ-ತಾಯಿಗಳು ಈ ಹಿಂದೆ ದಾಂಡೇಲಿಯಲ್ಲಿ ಒಟ್ಟಾಗಿ ವಾಸವಿದ್ದರು
ಘಟನೆ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics