ರಾಜ್ಯ

ಉತ್ತರ ಕನ್ನಡ ಮೀನು ಆಮದಿನ ಮೇಲೆ ಗೋವಾ ವಿಧಿಸಿದ್ದ ನಿರ್ಬಂಧ ತೆರವು, ದಕ್ಷಿಣ ಕನ್ನಡಕ್ಕಿಲ್ಲ

Nagaraja AB

ಕಾರವಾರ:  ಕರ್ನಾಟಕದಿಂದ  ಹೆಚ್ಚಾದ ಒತ್ತಡಕ್ಕೆ  ಕಡೆಗೂ ಮಣಿದ ಗೋವಾ ಉತ್ತರ ಕನ್ನಡ ಜಿಲ್ಲೆಗಳ ಮೀನುಗಳ ಆಮದಿನ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ. ಆದಾಗ್ಯೂ, ಉಡುಪಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗಳ ಮೀನುಗಳ ಮೇಲಿನ ನಿರ್ಬಂಧವನ್ನು ಮುಂದುವರೆಸಿದೆ.

ಕಾರವಾರ ಮತ್ತಿತರ ಕಡೆಗಳಿಂದ ಆಮದಾಗುವ ಮೀನುಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವಂತಹ ರಾಸಾಯನಿಕ  ಪತ್ತೆಯಾಗಿರುವ ಕಾರಣ ನೀಡಿ  ಅವುಗಳ ಆಮದನ್ನು ನಿರ್ಬಂಧಿಸಿ ಗೋವಾ ಆರೋಗ್ಯ ಇಲಾಖೆ ಘೋಷಿಸಿತ್ತು.

ಆದರೆ, ಇದರ ವಿರುದ್ಧ ಕಾರವಾರದಲ್ಲಿ ಮೀನುಗಾರರು ತೀವ್ರ ಪ್ರತಿಭಟನೆ ನಡೆದಿತ್ತಲ್ಲದೇ, ಮೀನುಗಳ ಸಂರಕ್ಷಣೆಗೆ ರಾಸಾಯನಿಕ ಬಳಸುವುದಿಲ್ಲ ಎಂದು  ಸ್ಪಷ್ಟಪಡಿಸಿದ್ದರು. ವಿವಿಧ ರಾಜಕೀಯ ನಾಯಕರು ಗೋವಾ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಒತ್ತಡ ಹಾಕಿದ್ದರು. ಕರ್ನಾಟಕಕ್ಕೆ ಆಗಮಿಸುವ ಗೋವಾ ಮೀನು ಕಂಟೈನರ್ ಟ್ರಕ್ ಗಳನ್ನು ಪ್ರತಿಭಟನಾ ನಿರತ ಮೀನುಗಾರರು ತಡೆಗಟ್ಟಿದ್ದರು.

ಈಗ ಉತ್ತರ ಕನ್ನಡ ಜಿಲ್ಲೆಗಳಿಂದ ಲಘು ವಾಹನಗಳಲ್ಲಿ ಮೀನು ಸಾಗಾಟಕ್ಕೆ ಗೋವಾ ಅವಕಾಶ ಮಾಡಿಕೊಟ್ಟಿದೆ. ಕಾರವಾರದಿಂದ ಗೋವಾ ಮಾರ್ಕೆಟ್ ಗಳಿಗೆ ಮೀನುಗಳ  ಸಾಗಾಟ ಮಾಡಲಾಗುತ್ತಿದೆ.  ಗೋವಾ ಪ್ರವೇಶಿಸುವ ಮುನ್ನ ಉತ್ತರ ಕನ್ನಡ ಜಿಲ್ಲಾ ಮೀನುಗಾರರು ಅಭಿವೃದ್ಧಿ ಸೂಸೈಟಿಯಿಂದ ನೀಡಿರುವ ಬಿಲ್ಲನ್ನು ತೋರಿಸಬೇಕಾಗುತ್ತದೆ ಎಂದು ಕಾರವಾರದ ಮೀನು ವ್ಯಾಪಾರಿ ಪ್ರವೀಣ್ ಜಾವ್ ಕರ್ ಹೇಳುತ್ತಾರೆ.

ತರಕಾರಿ ಹಾಗೂ ಮೀನಿಗಾಗಿ ಗೋವಾ ಕರ್ನಾಟಕದ ಮೇಲೆ ಅವಲಂಬಿತವಾಗಿದೆ. ಗೋವಾದಲ್ಲಿ ಮೀನಿಗೆ ತುಂಬಾ ಬೇಡಿಕೆ ಇದೆ. ಗೋವಾ ಗಡಿಗೆ ಹೊಂದಿಕೊಂಡಂತೆ ಕಾರವಾರ ಇದೆ. ಆದರೆ, ಮೀನು ಸಂರಕ್ಷಣೆಗೆ ರಾಸಾಯನಿಕ ಬಳಸಲಾಗುತ್ತಿದೆ ಎಂಬ ಕಾರಣ ನೀಡಿ ಜುಲೈ ತಿಂಗಳಿಂದ ಮೀನು ಆಮದನ್ನು ಗೋವಾ ನಿರ್ಬಂಧಿಸಿತ್ತು ಎಂದು ಕಾರವಾರದ ಮೀನುಗಾರರ ಮುಖಂಡರೊಬ್ಬರು ಹೇಳಿದ್ದಾರೆ.

SCROLL FOR NEXT