ರಾಜ್ಯ

ಮಹಿಳೆ ಮೇಲೆ ಹಲ್ಲೆ ನಡೆಸಿದ್ದು ನಾನೇ, ಶಿಕ್ಷೆ ಕೊಡಿ: ನ್ಯಾಯಾಲಯದ ಎದುರು ತಪ್ಪೊಪ್ಪಿಕೊಂಡ ಎಟಿಎಂ ರಾಕ್ಷಸ

Manjula VN
ಬೆಂಗಳೂರು: 5 ವರ್ಷಗಳ ಹಿಂದೆ ನಗರದ ಕಾರ್ಪೊರೇಷನ್ ವೃತ್ತದ ಎಟಿಎಂ ಕೇಂದ್ರದಲ್ಲಿ ಮಹಿಳಾ ಬ್ಯಾಂಕ್ ಉದ್ಯೋಗಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಆರೋಪಿ ಮಧುಕರ್ ರೆಡ್ಡಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದು, ಶಿಕ್ಷೆ ವಿಧಿಸುವವಂತೆ ಮನವಿ ಮಾಡಿಕೊಂಡಿದ್ದಾನೆ. 
ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಮಧುಕರ ರೆಡ್ಡಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆಗಾಗಿ ಆತನನ್ನು ಪೊಲೀಸರು ನಿನ್ನೆ ನಗರದ 65ನೇ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. 
ವಿಚಾರಣೆ ವೇಳೆ ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆಸಿದ್ದು ನಾನೇ. ಈ ಪ್ರಕರಣದಲ್ಲಿ ವಿಚಾರಣೆಯ ಅಗತ್ಯವಿಲ್ಲ. ಇಂದೇ ನನ್ನ ತಪ್ಪಿಗೆ ಶಿಕ್ಷೆ ನೀಡಿ. ನನ್ನ ಪರವಾಗಿ ಯಾವುದೇ ವಕೀಲರು ವಾದ ಮಂಡಿಸುವುದು ಬೇಡ. ನನಗೆ ಹೆಂಡತಿ ಮಕ್ಕಳಿದ್ದಾರೆ. ನಾನು ವಾಪಸ್ಸು ಹೋಗಬೇಕು. ಈ ಹಿನ್ನಲೆಯಲ್ಲಿ ದಯವಿಟ್ಟು ಈಗಾಗಲೇ ನನಗೆ ಶಿಕ್ಷೆ ನೀಡಿ ಸ್ವಾಮಿ ಎಂದು ನ್ಯಾಯಾಧೀಶರ ಪಳಿ ಮನವಿ ಮಾಡಿಕೊಂಡಿದ್ದಾರೆ. 
ಇದಕ್ಕೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಧೀಶಕರು, ನಿಮ್ಮ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸುವಂತಹ ಆರೋಪವಿದೆ. ತಪ್ಪಿ ಒಪ್ಪಿಕೊಂಡ ಕೂಡಲೇ ನಿಮಗೆ ಶಿಕ್ಷೆ ಕಡಿಮೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವಕೀಲರನ್ನು ನೇಮಿಸುವ ಬಗ್ಗೆ ಪೊಲೀಸರ ಜೊತೆ ಚರ್ಚಿಸಿ ತಿಳಿಸಿ ಎಂದು ಸೂಚಿಸಿ ಪ್ರಕರಣದ ವಿಚಾರಣೆಯನ್ನು ಜನವರಿ 7ಕ್ಕೆ ಮುಂದೂಡಿದರು. 
SCROLL FOR NEXT