ಬೀದರ್: 2007ರ ಕರ್ನಾಟಕ ಕೇಡರ್ ಬ್ಯಾಚ್ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣ ತನಿಖೆಗಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ಕರ್ನಾಟಕದ ಬೀದರ್ ಗೆ ಆಗಮಿಸಿದೆ.
ಕಳೆದ ವರ್ಷ ಮೇ ನಲ್ಲಿ ಉತ್ತರ ಪ್ರದೇಶದ ಲಖನೌದಲ್ಲಿರುವ ವಿಐಪಿ ಅತಿಥಿ ಗೃಹದ ಹೊರಗೆ ಅನುರಾಗ್ ತಿವಾರಿ ಅವರ ದೇಹ ಪತ್ತೆಯಾಗಿತ್ತು. ಮೃತದೇಹದ ಮರಣೋತ್ತರ ವರದಿಯಲ್ಲಿ ಆಸ್ಪಿಕ್ಸಿಯಾದ ಕಾರಣ ಈ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು.
ಮೃತರ ಕುಟುಂಬದವರು ಒತ್ತಡ ಹಾಕಿದ್ದ ಕಾರಣ ಐಎಎಸ್ ಅಧಿಕಾರಿಯ ಸಾವಿನ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿತ್ತು. ಅಷ್ಟೇ ಅಲ್ಲದೆ ಐಪಿಸಿ ಸೆಕ್ಷನ್ 302ರ ಅನುಸಾರ ಅಪರಿಚಿತ ಅಪರಾಧಿಯ ವಿರುದ್ಧ ಲಖನೌ ಪೋಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದರು.
ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಮೀಷನರ್ ಆಗಿ ಅನುರಾಗ್ ತಿವಾರಿ ಸೇವೆ ಸಲ್ಲಿಸುತ್ತಿದ್ದರು. ನಾಲ್ಕು ವಾರಗಳ ರಜೆ ಮೇರೆಗೆ ತಮ್ಮ ಊರಿಗೆ ತೆರಳಿದ್ದ ತಿವಾರಿ ನಿಗೂಢವಾಗಿ ಸಾವಿಗೀಡಾಗಿದ್ದರು. ತಮ್ಮ ಜನ್ಮದಿನದಂದೇ ಸಾವಿಗೆ ತುತ್ತಾಗಿದ್ದ ಐಎಎಸ್ ಅಧಿಕಾರಿಯ ಹತ್ಯೆ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು.