ನೀತಿ ಆಯೋಗದ ವರದಿಯೇ ಹೇಳಿದೆ ಕರ್ನಾಟಕ ನಂ.1; ಪ್ರಧಾನಿ ಬೇಜವಾಬ್ದಾರಿ ಹೇಳಿಕೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಆಧಾರ ರಹಿತ ಆರೋಪ ಮಾಡುವ ಮೂಲಕ ಪ್ರಧಾನಿ ಸ್ಥಾನಕ್ಕೆ ಅಗೌರವ ತೋರಿದ್ದಾರೆ ಮತ್ತು ಅವರು ಪ್ರಧಾನಿಯಾಗಿ ಮುಂದುವರಿಯಲು ನೈತಿಕವಾಗಿ ಅನರ್ಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಕಿಡಿ ಕಾರಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ 10 ಪರ್ಸೆಂಟೇಜ್ ಸರ್ಕಾರ, ರಾಜ್ಯದಲ್ಲಿ ಮಾಫಿಯಾಗಳ ನಂಗಾನಾಚ್ ನಡೆಯುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ನೀತಿ ಆಯೋಗದ ಅಂಕಿ-ಅಂಶಗಳನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.
ವಿಧಾನಮಂಡಲದ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಸಿಎಂ, ಪ್ರಧಾನಿ ನರೇಂದ್ರ ಮೋದಿ ಅವರು ಬೇಜವಾಬ್ದಾರಿ, ಸುಳ್ಳು ಆರೋಪ ಮಾಡಿದ್ದಾರೆ, ಅಭಿವೃದ್ಧಿ ವಿಷಯದಲ್ಲಿ ಕರ್ನಾಟಕ ನಂ.1 ರಾಜ್ಯ ಎಂದು ನೀತಿ ಆಯೋಗದ ವರದಿಯೇ ಹೇಳಿದೆ ಎಂದಿದ್ದಾರೆ. ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕವಾಗಿದ್ದು, ನಮ್ಮ ಪಾಲನ್ನು ಕೇಂದ್ರ ಸರ್ಕಾರ ವಾಪಸ್ ನೀಡಿದೆ, ಶೇ.38 ರಷ್ಟನ್ನು ನಾವೇ ರಫ್ತು ಮಾಡುತ್ತಿದ್ದೆವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ
ನಿನ್ನೆ ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಮಾತನಾಡಲಿಲ್ಲ, ನಮ್ಮ ಸರ್ಕಾರದ ಬಗ್ಗೆ ಸುಳ್ಳಿನ ಕಂತೆಯನ್ನೇ ಬಿಚ್ಚಿಟ್ಟರು, ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದಿದ್ದ ಯಡಿಯೂರಪ್ಪ ಹಾಗೂ ಕಟ್ಟಾ ಸುಬ್ರಹ್ಮಣ್ಯಂ ನಾಯ್ಡು ಅವರನ್ನು ವೇದಿಕೆಯಲ್ಲಿ ತಮ್ಮ ಪಕ್ಕದಲ್ಲೇ ಕೂರಿಸಿಕೊಂಡು ನಮ್ಮ ಸರ್ಕಾರದ ಬಗ್ಗೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇದಕ್ಕಿಂತ ನಾಚಿಕೆಗೇಡಿದ ಸಂಗತಿ ಇಲ್ಲ ಎಂದು ಸಿಎಂ ಪ್ರಧಾನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಭ್ರಷ್ಟಾಚಾರಗಳು ಬಯಲಾಗುತ್ತದೆ ಎಂದು 9 ವರ್ಷಗಳ ಕಾಲ ಲೋಕಾಯುಕ್ತರನ್ನು ನೇಮಕ ಮಾಡಿರಲಿಲ್ಲ, ಈ ವರೆಗೂ ಕೇಂದ್ರ ಸರ್ಕಾರ ಲೋಕಪಾಲರನ್ನು ನೇಮಕ ಮಾಡಿಲ್ಲ ಎಂದು ಸಿಎಂ ಪ್ರಧಾನಿ ವಿರುದ್ಧ ಆರೋಪ ಮಾಡಿದ್ದಾರೆ.
ಇನ್ನು ಸಾರ್ವಜನಿಕ ಆರೋಗ್ಯಕ್ಕಾಗಿ ಅತ್ಯಂತ ಕಡಿಮೆ ಖರ್ಚು ಮಾಡಿರುವ ದಕ್ಷಿಣ ಭಾರತದ ರಾಜ್ಯವೆಂದರೆ ಅದು ಕರ್ನಾಟಕ ಎಂಬ ಪ್ರಧಾನಿ ಆರೋಪಕ್ಕೂ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಯೂನಿವರ್ಸಲ್ ಹೆಲ್ತ್ ಸ್ಕೀಂ ನಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ, ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಾಧನೆಗೆ ಜನವರಿ ತಿಂಗಳಲ್ಲಿ ಕೇಂದ್ರ ಸರ್ಕಾರವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಬರಗಾಲದಲ್ಲಿ ರೈತರ ಖಾತೆಗೆ ಪರಿಹಾರವನ್ನು ನೇರವಾಗಿ ವರ್ಗಾವಣೆ ಮಾಡಿದ್ದೇವೆ. ಎಪಿಎಂಸಿಯಲ್ಲಿ ಆನ್ ಲೈನ್ ಮಾರ್ಕೆಟಿಂಗ್ ವ್ಯವಸ್ಥೆಯಲ್ಲಿಯೂ ಕರ್ನಾಟಕವೇ ಮುಂದಿದೆ ರಾಜ್ಯದ ರೈತರ ಆದಾಯ ಹೆಚ್ಚಾಗಿದೆ ಎಂದು ನೀತಿ ಆಯೋಗದ ವರದಿಯೇ ಹೇಳಿದೆ. ಆದರೆ ಪ್ರಧಾನಿ ಮೋದಿ ನಮ್ಮ ಸರ್ಕಾರದ ವಿರುದ್ಧ ಆಧಾರ ರಹಿತ, ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ಪ್ರತ್ಯಾರೋಪ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics