ಮುಖ್ಯಮಂತ್ರಿ ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ಬೆಂಗಳೂರು: ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಉಚಿತ ಎಲ್ ಪಿಜಿ ಸಂಪರ್ಕ ಒದಗಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹಾತ್ವಾಕಾಂಕ್ಷೆಯ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗೆ ತೊಡಕುಂಟಾಗಿದೆ.
ತೈಲ ಮಾರುಕಟ್ಟೆ ಕಂಪೆನಿಗಳ ಮೂಲಕ ಯೋಜನೆಯನ್ನು ಜಾರಿಗೆ ತರುವ ಬದಲಿಗೆ ವಿತರಕರ ಕಾರ್ಯಜಾಲದೊಳಗೆ ತರುವುದಕ್ಕೆ ಕೇಂದ್ರ ಪೆಟ್ರೊಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ತನ್ನ ಅಸಮ್ಮತಿ ವ್ಯಕ್ತಪಡಿಸಿದೆ.
ಈ ವ್ಯವಸ್ಥೆಯಿಂದ ದೊಡ್ಡ ಪ್ರಮಾಣದಲ್ಲಿ ಅವ್ಯವಸ್ಥೆಯುಂಟಾಗುವ ಸಾಧ್ಯತೆಯಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಮೊನ್ನೆ ಮಂಗಳವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವರು ಮತ್ತು ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರ ಮಧ್ಯೆ ನಡೆದ ಜಂಟಿ ಸಭೆಯಲ್ಲಿ ಈ ಹಿಂದೆ ಒಪ್ಪಿಕೊಂಡಂತೆ ಅನಿಲ ಭಾಗ್ಯ ಯೋಜನೆಯನ್ನು ಜಾರಿಗೆ ತರುವುದಾಗಿ ಕರ್ನಾಟಕ ಸರ್ಕಾರ ಹೇಳಿತ್ತು.
ಆದರೆ ಅನಿಲ ಭಾಗ್ಯ ಯೋಜನೆ ಜಾರಿ ಘೋಷಿಸುವಾಗ ತನ್ನ ಹಿಂದಿನ ಒಪ್ಪಂದದಂತೆ ಕರ್ನಾಟಕ ಸರ್ಕಾರ ನಡೆದುಕೊಂಡಿಲ್ಲ. ಸ್ಥಾಪಿತ ಕಾರ್ಯವಿಧಾನಕ್ಕೆ ಅನುಗುಣವಾಗಿಲ್ಲದಿರುವುದರಿಂದ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಇದಕ್ಕೆ ಸಮ್ಮತಿ ಸೂಚಿಸುವುದಿಲ್ಲ ಎಂದು ಹೇಳಿದೆ.
ಆದರೆ ರಾಜ್ಯ ಸರ್ಕಾರ ತನ್ನ ತೀರ್ಮಾನದಂತೆ ಯೋಜನೆ ಜಾರಿಗೆ ಮುಂದಾಗಿದ್ದು, ತೈಲ ಮಾರುಕಟ್ಟೆ ಕಂಪೆನಿಗಳ ಬದಲಿಗೆ ನೇರವಾಗಿ ವಿತರಕರಿಂದ ಸಿಲೆಂಡರ್ ಪೂರೈಕೆಯಾದರೆ ಹೆಚ್ಚು ಪಾರದರ್ಶಕತೆ ತರಬಹುದು ಎಂದು ಹೇಳಿದೆ.
ಕೇಂದ್ರ ಸರ್ಕಾರದ ಸಹಯೋಗದಲ್ಲಿ ಅನಿಲ ಭಾಗ್ಯ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಪತ್ರಿಕೆಗಳಲ್ಲಿ ಜಾಹಿರಾತು ನೀಡಿರುವುದಕ್ಕೆ ಕೂಡ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಅಸಹನೆ ವ್ಯಕ್ತಪಡಿಸಿದೆ. ಈ ಹಿಂದೆ ಕರ್ನಾಟಕ ಸರ್ಕಾರ ಕೇಂದ್ರವನ್ನು ಅನುಮೋದನೆಗೆ ಸಂಪರ್ಕಿಸಿತ್ತು. ಆಗ ಪ್ರಧಾನ ಮಂತ್ರಿಯವರ ಉಜ್ವಲ ಯೋಜನೆಯಡಿ ಪೂರಕ ಯೋಜನೆಯಾಗಿ ಮತ್ತು ತೈಲ ಕಂಪೆನಿಗಳ ಮೂಲಕ ಮಾತ್ರವೇ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲಾಗಿತ್ತು ಎಂದು ತನ್ನ ಅಸಹನೆ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಕಳೆದ ವರ್ಷ ಜುಲೈಯಲ್ಲಿ ಕೇಂದ್ರ ಸರ್ಕಾರದಿಂದ ನಮಗೆ ಅನುಮೋದನೆ ಸಿಕ್ಕಿತು. ಯೋಜನೆ ವಿಧಾನವನ್ನು ಬದಲಾಯಿಸುವ ಕುರಿತು ಈಗ ಸಮಸ್ಯೆ ತಲೆದೋರಿದೆ. ಹೆಚ್ಚಿನ ಪಾರದರ್ಶಕತೆ ಕಾಪಾಡಲು ನಾವು ವಿತರಕರ ಮೂಲಕ ಅನಿಲ ಪೂರೈಕೆ ಮಾಡುತ್ತಿದ್ದೇವೆ. ತೈಲ ಕಂಪೆನಿಗಳ ಬದಲಿಗೆ ವಿತರಕರ ಮೂಲಕ ಏಕೆ ಹೋಗುತ್ತಿದ್ದೇವೆ ಎಂದು ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆದು ವಿವರಿಸುತ್ತೇವೆ ಎಂದರು.
ಅನಿಲ ಸೇವೆ: ಅನಿಲ ಭಾಗ್ಯ ಯೋಜನೆಯಡಿ, ರಾಜ್ಯ ಸರ್ಕಾರ ಉಚಿತ ಎಲ್ ಪಿಜಿಯನ್ನು ರಾಜ್ಯದ ಸುಮಾರು 27 ಲಕ್ಷ ಕಡು ಬಡವರಿಗೆ ವಿತರಿಸುತ್ತಿದೆ.
ಪ್ರಧಾನ ಮಂತ್ರಿಯವರ ಉಜ್ವಲ ಯೋಜನೆ ಮಾದರಿಯಲ್ಲಿ ಇದನ್ನು ಕೂಡ ಜಾರಿಗೆ ತರಲಾಗುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಪ್ರಧಾನ ಮಂತ್ರಿಯವರ ಉಜ್ವಲ ಯೋಜನೆಯಡಿ ಸುಮಾರು 2,16 ಲಕ್ಷ ಕುಟುಂಬಗಳು ಆಯ್ಕೆಯಾಗಿದ್ದು ಅವರಿಗೆ ಇನ್ನೂ ಉಚಿತ ಅನಿಲ ಸಂಪರ್ಕ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಉಪಯೋಗವಾಗಲು ಸರ್ಕಾರ ಈ ಯೋಜನೆ ತರುತ್ತಿದೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಜುಲೈ 6ರಂದು ಮುಖ್ಯಮಂತ್ರಿ ಅನಿಲ ಯೋಜನೆಯನ್ನು ಘೋಷಿಸಲಾಗಿದ್ದು, ಮುಂದಿನ ವಾರ ರಾಜ್ಯಾದ್ಯಂತ ಜಾರಿಗೆ ಬರಲಿದೆ.