ಜೀವಜಲದ ಕೊರತೆ: ಜಾಗತಿಕ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೆ ಸ್ಥಾನ
ಬೆಂಗಳೂರು: ಜಗತ್ತಿನ ಹನ್ನೊಂದು ನಗರಗಳಲ್ಲಿ ಭವಿಷ್ಯದ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಲಿದೆ ಎಂದು ಬಿಬಿಸಿ ವರದಿ ಮಾಡಿದ್ದು ಈ ಹನ್ನೊಂದು ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಬೆಂಗಳೂರು ಎರಡನೆ ಸ್ಥಾನದಲ್ಲಿದೆ.
ಉದ್ಯಾನ ನಗರಿಯಾಗಿದ್ದ ಬೆಂಗಳೂರು ಮಾಹಿತಿ ತಂತ್ರಜ್ಞಾನ ಹಬ್ ಆಗಿ ಮಾರ್ಪಾಡಾಗಿದ್ದು ದಿನದಿನಕ್ಕೆ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬೆಂಗಳೂರು ಜನಸಂಖ್ಯೆ ಕಾರಣ ನಗರಕ್ಕೆ ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ ವ್ಯವಸ್ಥೆ ನಿರ್ಮಾಣ ಕಾಮಗಾರಿ ಬಹು ದೊಡ್ಡ ಸವಾಲಾಗಿದೆ. ಬೆಂಗಳೂರಿನಲ್ಲಿರುವ ಒಟ್ಟು ಕೆರೆ ನೀರಿನ್ಬಲ್ಲಿ ಶೇ.85ರಷ್ಟು ನೀರು ಕೃಷಿ ಹಾಗು ಕೈಗಾರಿಕಾ ಉದ್ದೇಶಕ್ಕೆ ಮಾತ್ರ ಬಳಸಬಹುದಾಗಿದೆ. ಅವುಗಳನ್ನು ಕುಡಿಯಲು ಅಥವಾ ಸ್ನಾನಕ್ಕಾಗಿ ಬಳಸಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಚೀನಾ ಹಾಗೂ ಭಾರತದಲ್ಲಿ ಜಲ ಮಾಲಿನ್ಯ ತೀವ್ರ ಸ್ವರೂಪದಲ್ಲಿದ್ದು ಬೆಂಗಳೂರು ಕೆರೆಗಳು ಸಹ ಈ ಸಮಸ್ಯೆಯಿಂದ ಮುಕ್ತವಾಗಿಲ್ಲ. ಪ್ರಸ್ತುತ ಬೆಂಗಳೂರಿಗೆ ದಿನನಿತ್ಯದ ಅಗತ್ಯಕ್ಕಾಗಿ ಕಾವೇರಿ ನದಿಯ ನೀರನ್ನು ಸರಬರಾಜು ಮಾಡಲಾಗುತ್ತಿದ್ದು ವಾರ್ಷಿಕ 19 ಟಿಎಂಸಿ ನೀರು ನಗರಕ್ಕೆ ಸರಬರಾಜಾಗುತ್ತಿದೆ. ಇದಲ್ಲದೆ ಪ್ರತಿನಿತ್ಯ ನಗರದಲ್ಲಿನ ಕೊಳವೆ ಬಾವಿಗಳಿಂದ 75 ಕೋಟಿ ಲೀ. ಅಂತರ್ಜಲವನ್ನು ಬಳಸಲಾಗುತ್ತಿದೆ.
ಇನ್ನು ಬಿಬಿಸಿ ವರದಿಯಲ್ಲಿ ಹೇಳಿರುವ ತೀವ್ರ ಜಲಕ್ಷಾಮ ಎದುರಿಸಲಿರುವ ವಿಶ್ವದ ಹನ್ನೊಂದು ನಗರಗಳ ಪೈಕಿ ಬ್ರಿಜಿಲ್ ನ ಸಾವೊ ಪಾವ್ಲೊ ಅಗ್ರ ಸ್ಥಾನದಲ್ಲಿದೆ. ಉಳಿದಂತೆ ಪಟ್ಟಿಯಲ್ಲಿರುವ ನಗರದ ಹೆಸರುಗಳು ಇಂತಿದೆ- ಬೆಂಗಳೂರು, ಬೀಜಿಂಗ್ (ಚೀನಾ), ಕೈರೊ (ಈಜಿಪ್ಟ್), ಜಕಾರ್ತ (ಇಂಡೋನೇಷ್ಯಾ), ಮಾಸ್ಕೊ (ರಷ್ಯಾ), ಇಸ್ತಾಂಬುಲ್ (ಟರ್ಕಿ), ಮೆಕ್ಸಿಕೊ ಸಿಟಿ (ಮೆಕ್ಸಿಕೊ), ಲಂಡನ್ (ಬ್ರಿಟನ್), ಟೋಕಿಯೊ (ಜಪಾನ್). ಮಿಯಾಮಿ (ಅಮೆರಿಕ)
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos