ಬೆಂಗಳೂರು: ಎಟಿಎಂ ದೋಚಲು ಯತ್ನ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಕಳ್ಳನೊಬ್ಬ ಕಾಮಾಕ್ಷಿಪಾಳ್ಯ ಠಾಣೆಯ ಹೊಯ್ಸಳ ಗಸ್ತು ವಾಹನದ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಕೊಟ್ಟಿಗೆಪಾಳ್ಯದ ನಿವಾಸಿಯಾಗಿರುವ ಹರೀಶ್ (35) ಬಂಧನಕ್ಕೊಳಗಾಗಿರುವ ಆರೋಪಿಯಾಗಿದ್ದಾನೆ. ಕೊಟ್ಟಿಗೆಪಾಳ್ಯದ ಆಕ್ಸಿಸ್ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ನುಗ್ಗಿ ಹಣ ದೋಚುವ ವೇಳೆ ಈತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
15 ವರ್ಷಗಳಿಂದ ಕೊಟ್ಟಿಗೆಪಾಳ್ಯದಲ್ಲಿ ನೆಲೆಯೂರಿರವ ಆರೋಪಿ ಹರೀಶ್, ಸುಂಕದಕಟ್ಟೆಯಲ್ಲಿ ವೆಲ್ಡಿಂಗ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ. ಎಟಿಎಂ ಘಟಕದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವ ಸಂಗತಿ ತಿಳಿದಿದ್ದ ಆತ, ರಾತ್ರಿ ವೇಳೆ ಅಲ್ಲಿನ ಹಣ ತುಂಬಿದ ಯಂತ್ರ ತೆರೆದು ಹಣ ದೋಚಲು ಸಂಚು ರೂಪಿಸಿದ್ದ. ಅದರಂತೆ ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಎಟಿಎಂ ಬಳಿ ಬಂದಿದ್ದಾನೆ.
ಬಳಿಕ ಯಂತ್ರವನ್ನು ಸ್ಕ್ರೂಡ್ರೈವರ್ ನಿಂದ ಆತ ತೆರೆದಿದ್ದಾನೆ. ಅದೇ ವೇಳೆ ಕೊಟ್ಟಿಗೆಪಾಳ್ಯದ ಕಡ ಪಹರೆಗೆ ಬಂದ ಎಎಸ್ಐ ರಾಜಣ್ಣ ಹಾಗೂ ಪೇದೆ ಬೆಳ್ಳಿಯಪ್ಪ, ಎಟಿಎಂನಲ್ಲಿ ವ್ಯಕ್ತಿಯ ಚಲನವಲನಗಳನ್ನು ಗಮನಿಸಿದ್ದಾರೆ.
ಆಗ ಅನುಮಾನಗೊಂಡ ಪೊಲೀಸರು, ವಾಹನ ನಿಲ್ಲಿಸಿ ಕೆಳಗಿಳಿಯುತ್ತಿದ್ದಂತೆಯ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಆರೋಪಿಯ ಬೆನ್ನು ಹತ್ತಿದ್ದಾರೆ. ಕಟ್ಟಡದ ಮೊದಲ ಮಹಡಿಗೆ ಓಡಿ ಹೋಗಿದ್ದ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆಂದು ತಿಳಿದುಬಂದಿದೆ.