ರಾಜ್ಯ

ಮಹದಾಯಿ ವಿವಾದ; ಕರ್ನಾಟಕದ ವಿರುದ್ಧ ಸಲ್ಲಿಸಿದ್ದ ನಿಂದನೆ ಅರ್ಜಿ ಹಿಂತೆಗೆದುಕೊಂಡ ಗೋವಾ

Manjula VN
ನವದೆಹಲಿ: ಮಹದಾಯಿ (ಕಳಸಾಕ-ಬಂಡೂರಿ) ನ್ಯಾಯಾಧಿಕರಣದಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ 'ಕರ್ನಾಟಕವು ಮಹದಾಯಿ ಯೋಜನೆ ಮುಂದುವರಿಸಿದೆ' ಎಂದು ಸಲ್ಲಿಸಿದ್ದ ನ್ಯಾಯಾಂದ ನಿಂದನೆ ಮಧ್ಯಂತರ ಅರ್ಜಿಯನ್ನು ಗೋವಾ ರಾಜ್ಯ ಹಿಂದಕ್ಕೆ ತೆಗೆದುಕೊಂಡಿದೆ ಇದರಿಂದಾಗಿ ಗೋವಾದ ಮೊಂಡು ಹಟಕ್ಕೆ ಸೋಲುಂಟಾಗಿದೆ. 
ನಿನ್ನೆ ನ್ಯಾಯಾಧೀಕರಣ ಸಮಾವೇಶಗೊಳ್ಳುತ್ತಿದ್ದಂತೆಯೇ ಗೋವಾ ರಾಜ್ಯದ ಪರವಾಗಿ ವಾದ ಮಂಡಿಸುತ್ತಿರುವ ವಕೀಲ ಆತ್ಮರಾಮ ನಾಡಕರ್ಣಿ ಅವರು ತಾವು ಅರ್ಜಿ ಹಿಂತೆಗೆದುಕೊಳ್ಳುವುದಾಗಿ ಹೇಳಿದರು. ನ್ಯಾಯಾಧೀಕರಣವೂ ಇದಕ್ಕೆ ಒಪ್ಪಿಗೆ ಸೂಚಿಸಿದೆ. 
ಕರ್ನಾಟಕದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯನ್ನು ನಾವು ಹಿಂತೆಗೆದುಕೊಳ್ಳುತ್ತೇವೆ. ಆದರೆ, ಸೂಕ್ತ ವೇದಿಕೆಯಲ್ಲಿ ಅರ್ಜಿ ಸಲ್ಲಿಸಲು ನಮ್ಮ ಅವಕಾಶವನ್ನು ಮುಕ್ತವಾಗಿಡಬೇಕು. ಹಾಗೆಯೇ ನಾವು ಈ ಬಗ್ಗೆ ಒಂದೆರಡು ದಿನದಲ್ಲಿ ಪ್ರಮಾಣ ಪತ್ರ ಸಲ್ಲಿಸಲಿದ್ದು, ಅದಕ್ಕೆ ಅವಕಾಶ ನೀಡಬೇಕೆಂದು ಗೋವಾ ಮನವಿ ಮಾಡಿಕೊಂಡಿದ್ದು, ಈ ಮನವಿಯನ್ನು ನ್ಯಾಯಾಧೀಕರಣ ಮನ್ನಿಸಿದೆ. 
ಗೋವಾ ಸರ್ಕಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದ ಬಳಿಕ ಕರ್ನಾಟಕ ಖಾರವಾಗಿ ಪ್ರತಿಕ್ರಿಯೆ ಸಲ್ಲಿಸಿತ್ತು. ನಾವು ನ್ಯಾಯಾಂಗ ನಿಂದನೆ ಮಾಡಿಲ್ಲ. ಮಹಾದಾಯಿ ನದಿ ನೀರಿನ ತಿರುವು ಮಾಡಿಲ್ಲ. ಹಾಗೆಯೇ ನ್ಯಾಯಾಧೀಕರಣಕ್ಕೆ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸುವ ಅಧಿಕಾರವಿಲ್ಲ ಎಂದು ಕರ್ನಾಟಕ ಹೇಳಿತ್ತು. ಅಷ್ಟೇ ಅಲ್ಲದೇ ಕರ್ನಾಟಕ ನ್ಯಾಯಾಧೀಕರಣದ ಆದೇಶವನ್ನು ಚಾಚು ತಪ್ಪದೆ ಪಾಲಿಸಿದ್ದು ಒಂದು ಹನಿ ನೀರನ್ನು ಕೂಡ ತಿರುಗಿಸಿಲ್ಲ ಎಂದು ಹೇಳಿತ್ತು. 
SCROLL FOR NEXT