ರಾಜ್ಯ

ಮಹಾಮಸ್ತಕಾಭಿಷೇಕಕ್ಕೆ ಕಾಶ್ಮೀರದ ಕೇಸರಿ, ಶಂಕರಪುರ ಮಲ್ಲಿಗೆ, ಜೈನ ಕಾಶಿಯಲ್ಲಿ ಹಬ್ಬದ ಸಡಗರ

Raghavendra Adiga
ಶ್ರವಣಬೆಳಗೊಳ: ಶ್ರವಣಬೆಳಗೊಳದಲ್ಲಿ ಈ ಬಾರಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಕಾಶ್ಮೀರದ ನಂಟಿದೆ. ಕಾಶ್ಮೀರದ ಪಂಪೋರ್ ಪ್ರದೇಶದಲ್ಲಿ ಬೆಳೆಸಲಾಗುವ ಅತ್ಯುತ್ಕೃಷ್ಠ  ಗುಣಮಟ್ಟದ ಕೇಸರಿಯನ್ನು ಬಾಹುಬಲಿಯ ಮಜ್ಜನಕ್ಕಾಗಿ ಬಳಸಲಾಗುತ್ತಿದೆ.
ತುಮಕೂರಿನ ಭಕ್ತ ರಾಜೇಂದ್ರ ಕುಮಾರ್ ಜೈನ್, ವಿಶ್ವದ "ಅತ್ಯುತ್ತಮವಾದ ಮತ್ತು ಶುದ್ಧವಾದ ಕೇಸರಿಯನ್ನು" ಉತ್ಪಾದಿಸುವ ಪ್ರದೇಶವೆಂದು ಹೆಸರಾದ  ಪಂಪೋರ್ ವಿಶಿಷ್ಟ ಕೇಸರಿ ಬೆಳೆಗಾರರ ಕಲ್ಯಾಣ ಮತ್ತು ಮಾರುಕಟ್ಟೆ ಸಹಕಾರ ಸಂಘದಿಂದ 3 ಕೆ.ಜಿ. ಕೇಸರಿಯನ್ನು ಖರೀದಿಸಿದ್ದಾರೆ,  ದಶಕಗಳ ಕಾಲ ಕೇಸರಿ ವ್ಯಾಪಾರದಲ್ಲಿ ತೊಡಗಿದ್ದ ಜೈನ್ ತಾವು ಖರೀದಿಸಿದ ಕೇಸರಿಯನ್ನು ಶ್ರವಣಬೆಳಗೊಳ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳಿಗೆ ನೀಡಿದ್ದಾರೆ.
ಶೆರ್-ಇ-ಕಾಶ್ಮೀರ ವಿಶ್ವವಿದ್ಯಾನಿಲಯವು ಕಣಿವೆಯಲ್ಲಿ ಕೇಸರಿ ಉತ್ಪಾದನೆಯನ್ನು ಉತ್ತಮಗೊಳಿಸಲು ಸ್ಥಳೀಯ ಸಹಕಾರಿ ಸಂಸ್ಥೆಗಳೊಂದಿಗೆ ಕಾರ್ಯಕ್ರಮ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಹವಾಮಾನ ವೈಪರಿತ್ಯದಿಂದ ಪಂಪೋರ್  ಕೇಸರಿ ಬೆಳೆಯಲ್ಲಿ ಇಳಿಮುಖವಾಗಿದ್ದು ಪರಿಣಾಮವಾಗಿ, ಬೆಲೆಗಳು ಗಗನಕ್ಕೇರಿದೆ. ಇದೇ ಮೊದಲ ಬಾರಿಗೆ ಪಂಪೋರ್ ನಿಂದ ಕೇಸರಿಯನ್ನು ನೇರವಾಗಿ ತರಲಾಗುತ್ತಿದೆ.
"ಭಕ್ತಿ ಮುಖ್ಯ. ವೆಚ್ಚದ ಬಗ್ಗೆ ನಾವು ಚಿಂತಿಸುವುದಿಲ್ಲ. ನೆರವು ಅಗತ್ಯವಿರುವವರಿಗೆ ಸೇವೆ ಸಲ್ಲಿಸುತ್ತಿದ್ದರೆ ಮತ್ತು ಧಾರ್ಮಿಕ ಕಾರ್ಯಗಳಿಗೆ ದಾನ ನೀಡಿದರೆ ದೇವರು ಸಂಪತ್ತು ಮತ್ತು ಆರೋಗ್ಯವನ್ನು ಕೊಡುತ್ತಾನೆ " ಜೈನ್ ಹೇಲಿದರು.
ಇನ್ನು ಈ ಬಾರಿ ಶ್ರವಣಬೆಳಗೊಳದಲ್ಲಿ ಉಡುಪಿಯ ಮಲ್ಲಿಗೆ ಪರಿಮಳವು ಸೇರಿರುತ್ತದೆ. ಮಹಾಮಸ್ತಕಾಭಿಷೇಕ ಮುಖ್ಯ ಕಾರ್ಯಕ್ರಮದ ಮೊದಲ ದಿನ, ಫೆ.17ರಂದು ಗೊಮ್ಮಟನಿಗೆ ನಡೆಸುವ ಪುಷ್ಪಾರ್ಚನೆಗೆ ಉಡುಪಿ ಶಂಕರಪುರ, ಶಿರ್ವ ಪ್ರದೇಶದಲ್ಲಿ ಬೆಳೆಯುವ ಸೂಜಿ ಮಲ್ಲಿಗೆಯನ್ನು ಬಳಸಲಾಗುತ್ತಿದೆ.
ಶಾಸನಗಳ ಡಿಜಿಟಲೀಕರಣ
ಶ್ರವಣಬೆಳಗೊಳದ ಎರಡು ಪ್ರಮುಖ ಬೆಟ್ಟಗಳಲ್ಲಿ 400 ಕ್ಕೂ ಹೆಚ್ಚು ಶಾಸನಗಳು ಲಭ್ಯವಾಗಿದೆ. ಇಲ್ಲಿನ ಚಂದ್ರಗಿಇರ್ ಅಥವಾ ಚಿಕ್ಕ ಬೆಟ್ಟ ಕ್ರಿ.ಶ. 3-4ನೇ ಶತಮಾನದಷ್ಟು ಪ್ರಾಚೀನ ಇತಿಹಾಸವನ್ನು ಹೊಂದಿದೆ.  ಎಎಸ್ಐ ಈಗ ಇಲ್ಲಿನ ಎಲ್ಲಾ ಶಾಸನಗಳನ್ನು ಡಿಜಿಟಲೀಕರಣಗೊಳಿಸಲು ಸಿದ್ದವಾಗಿದೆ. "ಕೆಲವು ಶಾಸನಗಳು ಗಾಳಿ ಮಳೆಯಿಂದ ಹಾಳಾಗುತ್ತಿದ್ದು ನಾವು ಇಂತಹ ಶಾಸನಗಳ ರಕ್ಷಣೆಗೆ ಒತ್ತು ಹೆಚ್ಚಿಸಿದ್ದೇವೆ. ಎಎಸ್ ಐ ಸಹ ಈ ಶಾಸನಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡುತ್ತಿದೆ" ಅಧಿಕಾರಿಗಳು ಹೇಳಿದರು.
SCROLL FOR NEXT