ಮಂಡ್ಯ: ರೈತ ಮುಖಂಡ, ಮೇಲುಕೋಟೆ ಕ್ಷೇತ್ರದ ಶಾಸಕ ಕೆಎಸ್ ಪುಟ್ಟಣ್ಣಯ್ಯ (69) ಫೆ.18 ರಂದು ನಿಧನರಾಗಿದ್ದಾರೆ.
ಹೃದಯಾಘಾತದಿಂದ ಕೆಎಸ್ ಪುಟ್ಟಣ್ಣಯ್ಯ ನಿಧನರಾಗಿದ್ದು, ಮಂಡ್ಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ವಿಮ್ಸ್ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
1949 ರ ಡಿ.23 ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಜನಿಸಿದ್ದ ಕೆಎಸ್ ಪುಟ್ಟಣ್ಣಯ್ಯ ಎಸ್ ಡಿ ಜಯರಾಮ್ ಮಾರ್ಗದರ್ಶನದಲ್ಲಿ 1983 ರಲ್ಲಿ ರೈತ ಸಂಘ ಸೇರಿ 1999 ರಲ್ಲಿ ರೈತ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸಕ್ರಿಯ ರಾಜಕಾರಣದಲ್ಲೂ ಗುರುತಿಸಿಕೊಂಡಿದ್ದ ಪುಟ್ಟಣ್ಣಯ್ಯ 1994 ರಲ್ಲಿ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದರು. 1999, 2004, 2008 ರ ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಕಂಡಿದ್ದ ಅವರು 2013 ರಲ್ಲಿ 2 ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.
ಪುಟ್ಟಣ್ಣಯ್ಯ ಪಾರ್ಥಿವ ಶರೀರವನ್ನು ಸ್ವಗ್ರಾಮ ಕ್ಯಾತನಹಳ್ಳಿಗೆ ಕೊಂಡೊಯ್ಯಲಾಗುತ್ತಿದ್ದು, ರೈತ ಮುಖಂಡನ ನಿಧನಕ್ಕೆ ರೈತ ಸಂಘಟನೆಯ ನಾಯಕರು, ಗಣ್ಯರು ಸಂತಾಪ ಸೂಚಿಸಿದ್ದಾರೆ.