ರಾಜ್ಯ

ಆಗಸ್ಟ್ ವರೆಗೆ ಪ್ರತಿ ಭಾನುವಾರ ಭಗವಾನ್ ಬಾಹುಬಲಿಗೆ ಮಹಾಮಜ್ಜನ

Lingaraj Badiger
ಹಾಸನ:  ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಭಗವಾನ್ ಬಾಹುಬಲಿಯ 88ನೇ ಮಹಾ ಮಸ್ತಕಾಭಿಷೇಕದ ಮೊದಲನೇ ಹಂತ ಮುಕ್ತಾಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ವೈರಾಗ್ಯಮೂರ್ತಿಯ ಮಹಾಮಜ್ಜನ ಕಣ್ತುಂಬಿಕೊಳ್ಳುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. 
ಫೆಬ್ರವರಿ 25ರಂದು ಮಹಾ ಮಸ್ತಕಾಭಿಷೇಕದ ಪ್ರಮುಖ ಘಟ್ಟಮುಕ್ತಾಯಗೊಂಡ ನಂತರ ಮುಂದಿನ ಆರು ತಿಂಗಳ ಕಾಲ ಪ್ರತಿ ಭಾನುವಾರ ಇದೇ ರೀತಿಯ ಮಹಾಮಜ್ಜನ ಮುಂದುವರೆಯಲಿದೆ ಎಂದು ಜೈನ ಮಠ ಘೋಷಿಸಿದೆ.
ವಿಂಧ್ಯಗಿರಿಯ ದೊಡ್ಡ ಬೆಟ್ಟದಲ್ಲಿರುವ ಭಗವಾನ್ ಬಾಹುಬಲಿ ಮಹಾಮಜ್ಜನಕ್ಕೆ ಕೇವಲ 5 ಸಾವಿರ ಜನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ ರಾಜ್ಯ ಸೇರಿದಂತೆ ದೇಶಾದ್ಯಂತ ಜೈನ ಸಂಘಟನೆಗಳು ಮಹಾಮಜ್ಜನ ಮುಂದುವರೆಸಲು ಬೇಡಿಕೆ ಹೆಚ್ಚಿದ್ದರಿಂದ ಮಾರ್ಚ್ ನಿಂದ ಆಗಸ್ಟ್ ವರೆಗೆ ಪ್ರತಿ ಭಾನುವಾರ ಮಹಾ ಮಸ್ತಕಾಭಿಷೇಕ ಮುಂದುವರೆಯಲಿದೆ ಎಂದು ಜೈನ ಮಠ ತಿಳಿಸಿದೆ.
ಮೊದಲ ಎಂಟು ದಿನಗಳಲ್ಲಿ ಹಲವು ಜನಕ್ಕೆ ಮಹಾಮಜ್ಜನ ಮಾಡುವ ಅವಕಾಶ ಸಿಕ್ಕಿಲ್ಲ. ಹೀಗಾಗಿ ಫೆ.25ರ ನಂತರ ಪ್ರತಿ ಭಾನುವಾರ ಮಹಾಮಜ್ಜನ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಕುಟುಂಬ ಮಾರ್ಚ್ ನಲ್ಲಿ ಹಾಗೂ ಹುಬ್ಬಳ್ಳಿಯ ಜೈನ ಸಮುದಾಯ ಮೇ ನಲ್ಲಿ ಮಹಾ ಮಸ್ತಕಾಭಿಷೇಕ ಮಾಡಲಿದೆ ಎಂದು ಜೈನ ಮಠದ ಟ್ರಸ್ಟಿಯೊಬ್ಬರು ಹೇಳಿದ್ದಾರೆ.
SCROLL FOR NEXT