ರಾಜ್ಯ

ಬೆಂಗಳೂರನ್ನು ಅತ್ಯಂತ ಕೊಳಕು ನಗರ ಮಾಡುವುದು ನಿಮ್ಮ ಉದ್ದೇಶವೇ?:ಬಿಬಿಎಂಪಿಗೆ ಹೈಕೋರ್ಟ್ ತರಾಟೆ

Sumana Upadhyaya

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉದ್ದೇಶ ಬೆಂಗಳೂರು ನಗರವನ್ನು ಅತ್ಯಂತ ಮಲಿನ ನಗರ ಮಾಡಬೇಕೆಂಬ ಉದ್ದೇಶವಿದೆಯೇ ಎಂದು ಛೀಮಾರಿ ಹಾಕಿದ ಕರ್ನಾಟಕ ಹೈಕೋರ್ಟ್ ತನ್ನ ಆದೇಶವನ್ನು ಪಾಲಿಕೆ ಪಾಲಿಸದ್ದಕ್ಕಾಗಿ 50,000 ರೂಪಾಯಿ ದಂಡವಿಧಿಸಿದೆ.

ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠ, ದೇಶದ ಬೇರೆ ನಗರಗಳಿಗೆ ಹೋಲಿಸಿದರೆ ಘನ ತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ಬಿಬಿಎಂಪಿ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದೆ ಎಂದರು. ತ್ಯಾಜ್ಯ ವಿಲೇವಾರಿ ವಿಷಯವನ್ನು ಗಂಭೀರವಾಗಿ ಪಾಲಿಕೆ ತೆಗೆದುಕೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ ಬೆಂಗಳೂರು ಹೊರತುಪಡಿಸಿ ಪ್ರತಿ ರಾಜ್ಯದಲ್ಲಿ ನಗರಪಾಲಿಕೆಗಳು ಮತ್ತು ಪುರಸಭೆಗಳಲ್ಲಿ ತ್ಯಾಜ್ಯ ನಿರ್ವಹಣೆಯ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದರು.ನಗರದಲ್ಲಿ ಘನತ್ಯಾಜ್ಯ ವಿಲೇವಾರಿಯನ್ನು ಸೂಕ್ತವಾಗಿ ನಿರ್ವಹಿಸುವಂತೆ 2012ರಲ್ಲಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಹೀಗೆ ಹೇಳಿದೆ. ಇದೇ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಮುಂದುವರಿದರೆ ಬಿಬಿಎಂಪಿ ಪ್ರಳಯ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಕಳೆದ ವರ್ಷ ನವೆಂಬರ್ 10ರಂದು ಕೋರ್ಟ್ ಹೊರಡಿಸಿರುವ ಆದೇಶ ಪ್ರಕಾರ ಬಿಬಿಎಂಪಿ ಆಯುಕ್ತರು ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯ ಛೀಮಾರಿ ಹಾಕಿತು. ಪ್ರತಿ ವಾರ್ಡುಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ವಾರ್ಡ್ ಸಮಿತಿ ಮೂಲಕ ಕಾರ್ಯಯೋಜನೆಯನ್ನು ತಯಾರಿಸುವಂತೆ ಮತ್ತು ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಬಿಬಿಎಂಪಿಗೆ ಆದೇಶ ನೀಡಿತ್ತು. ಒಂದು ವೇಳೆ ವಾರ್ಡುಗಳ ಚುನಾಯಿತ ಪ್ರತಿನಿಧಿಗಳು ಕಾರ್ಯಯೋಜನೆಯನ್ನು ತಯಾರಿಸದಿದ್ದರೆ ಮತ್ತು ತಾವು ಬರೆದ ಪತ್ರಕ್ಕೆ ಪ್ರತಿಕ್ರಿಯಿಸದಿದ್ದರೆ ಆಯುಕ್ತರು ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಆಯುಕ್ತರ ಕಡೆಯಿಂದ ಆಗಿರುವ ತಪ್ಪನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ಇದಕ್ಕೆ ಕಾರಣವಾದ ಅಧಿಕಾರಿಗಳು ಮತ್ತು ವಾರ್ಡ್ ಸಮಿತಿ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಆದೇಶ ನೀಡಿದೆ.

SCROLL FOR NEXT