ಬೆಂಗಳೂರು: ಮಾಸಾಂತ್ಯಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಮಂಡಿಸಲಾಗುತ್ತಿದೆ.ಬರಲಿರುವ ರಾಜ್ಯ ವಿಧಾನಸಭಾ
ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಬಜೆಟ್ ನ್ನು ತಮ್ಮ ಪಕ್ಷದ ದೂರದೃಷ್ಟಿಯಂತೆರೂಪಿಸಬೇಕೆಂಬುದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಿಲುವಾಗಿದೆ.
ಈ ಬಜೆಟ್ ನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಸಚಿವರಾದ ಕೆ. ಜೆ. ಜಾರ್ಜ್. ರಾಮಲಿಂಗಾರೆಡ್ಡಿ ಅವರ ಪ್ರಭಾವ ಹೆಚ್ಚಾಗಿರಲಿದೆ.
ಈ ವರ್ಷ ಕಾಂಗ್ರೆಸ್ ಪಕ್ಷದ ಮೇಯರ್ ಇದ್ದು, ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಜೆಡಿಎಸ್ ಬಳಿಯಿದೆ. ಈ ಸಮಿತಿ ಅಧ್ಯಕ್ಷ
ಮಹಾದೇವ್ ಬಜೆಟ್ ಮಂಡಿಸಲಿದ್ದಾರೆ. ಒಂದು ವೇಳೆ ಇದಕ್ಕೆ ಅವಕಾಶ ನೀಡದಿದ್ದರೆ ತಮ್ಮ ಬೆಂಬಲ ವಾಪಾಸ್ ಪಡೆಯುವುದಾಗಿ ಜೆಡಿಎಸ್ ಹೇಳಿದೆ.
ಆದರೆ,ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದು, ಕಾಂಗ್ರೆಸ್ ಯೇತರರು ಬಜೆಟ್ ಮಂಡಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.
ಆದರೆ, ಯಾವ ಪಕ್ಷದ ಪರಿಕಲ್ಪನೆಯಂತೆ ಬಿಬಿಎಂಪಿ ಬಜೆಟ್ ರೂಪಿತಗೊಳ್ಳಲಿದೆ ಎಂಬುದು ಗೊಂದಲಕ್ಕೆ ಕಾರಣವಾಗಿದೆ.
ಈ ಮಧ್ಯೆ ಶಾಸಕ ಗೋಪಾಲಯ್ಯ ಮಾತನಾಡಿ, ಪಾಲಿಕೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೇಯರ್ ಹಾಗೂ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬೇರೆ ಬೇರೆ ಪಕ್ಷಗಳಲ್ಲಿದ್ದು, ಉಭಯ ಪಕ್ಷಗಳ ಮುಖಂಡರು ಕೂತು ಚರ್ಚಿಸಿ ಬಜೆಟ್ ರೂಪಿಸುತ್ತವೆ. ಆದರೂ, ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ದೂರದೃಷ್ಟಿಯಂತೆ ಬಜೆಟ್ ರೂಪಿತವಾಗಲಿದೆ ಎಂದು ಹೇಳಿದ್ದಾರೆ.