ಬಶೀರ್ ಅಂತಿಮ ಸಂಸ್ಕಾರದ ವೇಳೆ ಸ್ಥಳದಲ್ಲಿ ನೆರೆದಿರುವ ನೂರಾರು ಸ್ಥಳೀಯರು
ಮಂಗಳೂರು: ಕರಾವಳಿ ಭಾಗದಲ್ಲಿ ನಡೆದ ಕೋಮುದ್ವೇಷಕ್ಕೆ ಮತ್ತೊಂದು ಜೀವ ಬಲಿಯಾಗಿದ್ದು, ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ದುಷ್ಕರ್ಮಿಗಳು ನಡೆಸಿದ ಇರಿತ ಪ್ರಕರಣಗಳದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಬ್ದುಲ್ ಬಶೀರ್ 4 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಭಾನುವಾರ ಮೃತಪಟ್ಟಿದ್ದಾರೆ.
ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಬಶೀರ್ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ತಲ್ವಾರ್ ನಿಂದ ಇರಿದು ಪರಾರಿಯಾಗಿದ್ದರು. ಬಳಿಕ ಬಶೀರ್ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಶೀರ್ ಅವರ ದೇಹ ಚಿಕಿತ್ಸೆಗೆ ಸ್ಪಂದಿಸದ ಕಾರಣ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಬಶೀರ್ ಸಾವನ್ನಪ್ಪುತ್ತಿದ್ದಂತೆಯೇ ನಗರದಲ್ಲಿ ಮತ್ತೆ ಯಾವುದೇ ರೀತಿಯ ಅಹಿತರ ಘಟನೆಗಳು ನಡೆಯದಂತೆ ಎಚ್ಚರಿಕೆವಹಿಸಿರುವ ಅಧಿಕಾರಿಗಳು ಮಂಗಳೂರಿನಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.
ಬಶೀರ್ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಸಾವನ್ನಪ್ಪಿದ್ದಾರೆಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.
ಇರಿತದಿಂದಾಗಿ ಅಬ್ದುಲ್ ಬಶೀರ್ ಅವರ ಕುತ್ತಿಗೆ, ಶ್ವಾಸನಾಳ ಹಾಗೂ ಎದೆಯ ಭಾಗಕ್ಕೆ ಗಂಭೀರವಾಗಿ ಏಟು ಬಿದ್ದಿತ್ತು. ಶಸ್ತ್ರಚಿಕಿತ್ಸೆ ನಡೆಸಿ ತಾತ್ಕಾಲಿಕ ಶ್ವಾಸನಾಳವನ್ನು ಜೋಡಿಸಲಾಗಿತ್ತು. ಕಿಡ್ನಿ ವೈಫಲ್ಯ ಕಂಡಿತ್ತು. ಆದರೂ ವೈದ್ಯರು ಹೆಚ್ಚಿನ ಮುತುವರ್ಜಿ ವಹಿಸಿ ಹೆಚ್ಚಿನ ಚಿಕಿತ್ಸೆಯನ್ನು ನೀಡಿದದ್ರು. ಕಳೆದ 3 ದಿನಗಳಲ್ಲಿ ಅಬ್ದುಲ್ ಬಶೀರ್"ಗೆ 18ಕ್ಕೂ ಹೆಚ್ಚು ಬಾಟಲಿ ರಕ್ತವನ್ನು ನೀಡಲಾಗಿತ್ತು.
ಮಂಗಳೂರು ದಕ್ಷಿಣ ಭಾಗದ ಶಾಶಕ ಮೊಹುದ್ದೀನ್ ಬಾವಾ ಅವರು ಮಾತನಾಡಿ, ಬಶೀರ್ ಅವರನ್ನು ರಕ್ಷಣೆ ಮಾಡಲು ವೈದ್ಯರು ಉತ್ತಮ ಚಿಕಿತ್ಸೆಗಳನ್ನು ನೀಡಿದ್ದರು ಎಂದು ಹೇಳಿದ್ದಾರೆ.
ಬಶೀರ್ ಅವರು ಸಾವನ್ನಪ್ಪಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಎಜೆ ಆಸ್ಪತ್ರೆಯ ಬಳಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಕುಟುಂಬ ಸದಸ್ಯನನ್ನು ಕಳೆದುಕೊಂಡ ದುಃಖದಲ್ಲಿದ್ದ ಬಶೀರ್ ಕುಟುಂಬಸ್ಥರು ಕೂಡ, ಬಶೀರ್ ಸಾವಿನಲ್ಲಿ ರಾಜಕೀಯ ಪಕ್ಷಗಳು, ಸಂಘಟನೆಗಳು ರಾಜಕೀಯ ಮಾಡಬಾರದು. ಜನರು ಶಾಂತಿಯನ್ನು ಕಾಪಾಡಿ, ಬಶೀರ್ ಆತ್ಮಕ್ಕೆ ಶಾಂತಿಯನ್ನು ಕೋರಬೇಕೆಂದು ಮನವಿ ಮಾಡಿಕೊಂಡರು.
ಬಶೀರ್ ಅವರ ಪುತ್ರ ಇರ್ಶಾನ್ ಅಬುಧಾಬಿಯಲ್ಲಿ ಉದ್ಯೋಗ ಮಾಡುತ್ತಿದ್ದು, ಪುತ್ರನ ಆಗಮನ ತಡವಾಗಿದ್ದರಿಂದಾಗಿ ಬಶೀರ್ ಅವರ ಅಂತ್ಯ ಸಂಸ್ಕಾರ ಕ್ರಿಯೆ ತಡವಾಗಿ ನಡೆಸಲಾಗಿತ್ತು. ವೀಸಾ ಕುರಿತಂತೆ ಕೆಲ ಸಮಸ್ಯೆಗಳು ಎದುರಾಗಿದ್ದರಿಂದಾಗಿ ಇರ್ಶಾನ್ ಆಗಮಿಸುವ ಕುರಿತಂತೆ ಕುಟುಂಬ ಸದಸ್ಯರು ಆತಂಕ ವ್ಯಕ್ತಪಡಿಸಿದ್ದರು. ಬಳಿಕ ಶಾಸಕ ಬಾವಾ ಹಾಗೂ ಇತರೆ ಅಧಿಕಾರಿಗಳು ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಇರ್ಶಾನ್ ಅವರು ತಂದೆ ಅಂತಿಮ ಸಂಸ್ಖಾರದಲ್ಲಿ ಭಾಗಿಯಾಗುವಂತೆ ನೋಡಿಕೊಂಡರು.