ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)ನ್ನು ದೇಶಾದ್ಯಂತ ನಿನ್ನೆ ನಡೆಸಲಾಗಿತ್ತು.
ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಈ ಬಾರಿಯ ಪರೀಕ್ಷೆ ಸಾಮಾನ್ಯವಾಗಿ ಪರಿಣಮಿಸಿದೆ. 300 ಪ್ರಶ್ನೆಗಳ ಪತ್ರಿಕೆಯಲ್ಲಿ ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್ ವಿಷಯಗಳನ್ನು ಇಡಲಾಗಿತ್ತು.
ಸ್ನಾತಕೋತ್ತರ ನೀಟ್ ಪರೀಕ್ಷೆಯಲ್ಲಿ ಈ ವರ್ಷದಿಂದ ಋಣಾತ್ಮಕ ಅಂಕಗಳನ್ನು(ನೆಗೆಟಿವ್ ಮಾರ್ಕ್ಸ್) ಜಾರಿಗೆ ತರಲಾಗಿದ್ದು, ಇದು ಹಲವು ಅಭ್ಯರ್ಥಿಗಳಿಗೆ ಇಷ್ಟವಾಗಿಲ್ಲ. ಏಕೆಂದರೆ ಸರಿ ಉತ್ತರಕ್ಕೆ 4 ಅಂಕಗಳನ್ನು ಗಳಿಸಿದರೆ ತಪ್ಪು ಉತ್ತರಕ್ಕೆ ಒಂದು ಅಂಕಗಳನ್ನು ಕಳೆದುಕೊಳ್ಳುತ್ತಾರೆ.
ಪದವಿ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಇರುವಂತೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆಯುವ ಮುನ್ನ ತಪಾಸಣೆ ಮಾಡಿಸಿಕೊಳ್ಳಬೇಕು. ನಿನ್ನೆ ನಡೆದ ಪರೀಕ್ಷೆ ಆರಂಭಕ್ಕೆ ಮುನ್ನ ಕೆಲವು ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಅವರ ಚಪ್ಪಲುಗಳನ್ನು ತೆಗೆದು ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸುವಂತೆ ಸೂಚಿಸಲಾಯಿತು. ಪೆನ್ನುಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವಂತಿರಲಿಲ್ಲ. ಇನ್ನು ಕೆಲವು ಕೇಂದ್ರಗಳಲ್ಲಿ, ಮಹಿಳಾ ಅಭ್ಯರ್ಥಿಗಳಿಗೆ ಅವರ ಕಿವಿಯೋಲೆ, ವಾಚುಗಳು ಮತ್ತು ಇತರ ಲೋಹದ ಆಭರಣಗಳನ್ನು ಕಳಚಿಟ್ಟು ಒಳಹೋಗುವಂತೆ ಸೂಚಿಸಲಾಯಿತು.ಈ ಕ್ರಮ ಅಭ್ಯರ್ಥಿಗಳಿಗೆ ಇರಿಸುಮುರುಸು ಉಂಟುಮಾಡಿದ್ದು ಸುಳ್ಳಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics