ರಾಜ್ಯ

ಬಿಜೆಪಿಯಿಂದ ಜೈಲ್ ಭರೋ ಚಳವಳಿ, ಶೋಭಾ ಕರಂದ್ಲಾಜೆ ಸೇರಿ ಹಲವು ಮುಖಂಡರ ಬಂಧನ

Raghavendra Adiga
ಕಲಬುರ್ಗಿ/ಹಾಸನ: ಕಲಬುರಗಿ ಮತ್ತು ಹಾಸನದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನೂರಾರು ಕಾರ್ಯಕರ್ತರು ಶುಕ್ರವಾರ ಬೀದಿಗೆ ಇಳಿದಿದ್ದು  ಬಿಜೆಪಿ-ಆರ್ ಎಸ್ ಎಸ್ ಮತ್ತು  ಬಜರಂಗದಳ ವಿರುದ್ಧದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೀಕೆಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಕಲಬುರ್ಗಿಯಲ್ಲಿ, 200ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ರಾಜ್ಯ ಘಟಕ ನೀಡಿದ 'ಜೈಲ್ ಭರೋ' ಆಂದೋಲನ ಕರೆ  ಅಂಗವಾಗಿ ಕಾಂಗ್ರೆಸ್ ಕಛೇರಿ ಎದುರು ಪ್ರತಿಭಟನೆ ನಡೆಸಿದ್ದರು. ಹಾಸನದಲ್ಲಿ ಸಹ ಬಿಜೆಪಿ ಮುಖಂಡರು ಪ್ರತಿಭಟನೆ  ನಡೆಸಿದ್ದು ರಾಜ್ಯ ಕಂಡ ಅತ್ಯಂತ ಕೆಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿದರು.
ಕಲಬುರ್ಗಿ ನಗರ ಘಟಕದ ಅಧ್ಯಕ್ಷ ಬಿ. ಜಿ. ಪಾಟೀಲ್ (ಎಂಎಲ್ ಸಿ), ಜಿಲ್ಲೆಯ ಗ್ರಾಮೀಣ ವಿಭಾಗದ ಅಧ್ಯಕ್ಷ ದೊಡ್ಡಪ್ಪ ಗೌಡ ನಾರಿಬಾಲ್, ಕಲಬುರಗಿ-ದಕ್ಷಿಣ ಎಂಎಲ್ಎ ದತ್ತಾತ್ರೇಯ ಪಾಟೀಲ್ ನಾರಿಬಾಲ್, ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಮತ್ತು ಮಾಜಿ ಎಂಎಲ್ಸಿ ಶಶೀಲ್ ನಮೋಶಿ ಇನ್ನೂ ಹಲವು ಪ್ರಮುಖ ನಾಯಕರು ಕಲಬುರ್ಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹಾಸನದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗ ರಮೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಕಾಂಗ್ರೆಸ್ ಕಛೇರಿಯತ್ತ ತೆರಳಿದ್ದಲ್ಲದೆ ಆಡಳಿತ ಪಕ್ಷದ ಕಛೇರಿಗೆ ಮುತ್ತಿಗೆ ಹಾಕಲು ಯತ್ನ ನಡೆಸಿದ್ದರು.
"ಕರ್ನಾಟಕವು ಸಿದ್ದರಾಮಯ್ಯನವರಂತಹಾ ಕೆಟ್ಟ ಮುಖ್ಯಮಂತ್ರಿಗಳನ್ನು ಕಂಡಿರಲಿಲ್ಲ. ಕಾಂಗ್ರೆಸ್ ಭಯೋತ್ಪಾದಕರಿಗೆ ಪ್ರಚೋದನೆ, ಸಹಕಾರ ನೀಡುತ್ತಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿಯಂತಹಾ ಮಾಜಿ ಪ್ರಧಾನಿಗಳೇ ಆರ್ ಎಸ್ ಎಸ್ ನ್ನು ಮುಟ್ಟಿಲ್ಲ ಅಂತಹುದರಲ್ಲಿ ಸಿದ್ದರಾಮಯ್ಯ ಅದಾವ ಆಧಾರದಲ್ಲಿ ಆರ್ ಎಸ್ ಎಸ್, ಭಜರಂಗದಳದವರು ಉಗ್ರಗಾಮಿಗಳೆಂದು ಹೇಳಿದ್ದಾರೆ?" ಯೋಗ ರಮೇಶ್ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು.
ತುಮಕೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಬಂಧನ
ಜೈಲ್ ಭರೋ ಚಲವಳಿಗೆ ತುಮಕೂರಿನಲ್ಲಿ ನಾಯಕತ್ವ ವಹಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷೆ ಜ್ಯೋತಿ ಗಣೇಶ್ ಕಾಂಗ್ರೆಸ್‌ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ತುಮಕೂರಿನ ಸರಕಾರಿ ಜೂನಿಯರ್‌ ಕಾಲೇಜು ಮೈದಾನದ‌ ಎದುರಿನ ಕಾಂಗ್ರೆಸ್ ಕಛೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೋಲೀಸರು ತಡೆದಿದ್ದಾರೆ. ಈ ವೇಳೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹೇಳಿಕೆ ಖಂಡಿಸಿ ಮಡಿಕೇರಿ, ಚಿಕ್ಕಮಗಲುರು ಹಾಗೂ ಮಂಗಳೂರುಗಳಲ್ಲಿಯೂ ಬಿಜೆಪಿ ಪ್ರತಿಭಟನೆ ನಡೆಸಿದೆ
SCROLL FOR NEXT